ಕೊಡೇಕಲ್ ಕಾಲಜ್ಞಾನಿಯ ಶಿವರಾತ್ರಿ ನುಡಿ

kodekal feb 19 2020
Published on

ದಿನೈದನೆಯ ಶತಮಾನದಲ್ಲಿ ಆಗಿಹೋದ ಕೊಡೇಕಲ್ ಬಸವಣ್ಣನವರು ಭಾವೈಕ್ಯತೆಯ ಹರಿಕಾರ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನಲ್ಲಿ ಕೊಡೇಕಲ್ ಕ್ಷೇತ್ರವಿದೆ. ಬಸವಣ್ಣನವರು ಕಾಲಜ್ಞಾನದ ವಚನಗಳ ಮೂಲಕ ಮನುಕುಲವನ್ನು ಉದ್ಧರಿಸಿದ್ದಾರೆ. ಇವರ ಸಾಹಿತ್ಯವೆಲ್ಲ ಅಮರಗನ್ನಡ ಎಂಬ ಸಾಂಕೇತಿಕ ಲಿಪಿಯಲ್ಲಿದೆ. ಕೆಲವು ವಚನಕಾರರು ವಚನ ಬರೆದರೆ, ಕೊಡೇಕಲ್ ಬಸವಣ್ಣನವರು ವಚನಗಳ ಜತೆ ಮುಂದಾಗುವ ಭವಿಷ್ಯವನ್ನು ಕಾಲಜ್ಞಾನದ ಮೂಲಕ ತಿಳಿಸಿದ್ದಾರೆ.

ಕಾಲಜ್ಞಾನಸಾಹಿತ್ಯವೆಂದರೆ ಮುಂದಾಗುವುದನ್ನು ತಿಳಿಸುವುದು. ಉತ್ತರ ಕರ್ನಾಟಕದ ಕೊಡೇಕಲ್​ನ ಕಾಲಜ್ಞಾನ ಇಂದಿಗೂ ಹೆಸರುವಾಸಿಯಾಗಿದೆ. ಇದರ ಮೂಲಕ ಸಂಭವನೀಯ ದುರಂತಗಳ ಬಗ್ಗೆ ಮೊದಲೇ ಊಹಿಸಿ ಪರಿಹಾರ ನೀಡುವ ಪ್ರಯತ್ನವನ್ನು ಕೊಡೇಕಲ್ ಬಸವಣ್ಣ ಮಾಡಿದ್ದಾರೆ. ಅವರ ಸಾಹಿತ್ಯ ಸಾಮಗ್ರಿಯಲ್ಲಿ ಎರಡು ರೀತಿಯ ಕಾಲಜ್ಞಾನ ರಚನೆಗಳಿವೆ. ಒಂದು ಹಂಡಿ ಭಿಕ್ಷದ ಕಾಲಜ್ಞಾನ ವಚನ. ಎರಡನೆಯದು ಸಾಮಾನ್ಯ ಕಾಲಜ್ಞಾನ. ಪ್ರತಿವರ್ಷ ಶಿವರಾತ್ರಿ ದಿನ ಬಸವೇಶ್ವರ ದೇವಸ್ಥಾನದಲ್ಲಿ ಕಾಲಜ್ಞಾನ ನುಡಿಯನ್ನು ಪಠಿಸಲಾಗುತ್ತದೆ. ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರದೊಂದಿಗೆ ಜಾಗರಣೆ ಮಾಡಿ ಕಾಲಜ್ಞಾನದ ಹೊತ್ತಿಗೆಯನ್ನು ತೆರೆಯಲಾಗುತ್ತದೆ. ಹೊತ್ತಿಗೆಯ ಮೊದಲ ಪುಟದಲ್ಲಿ ಯಾವ ವಾಣಿ ಬರುತ್ತದೆಯೋ ಅದುವೇ ಶಿವರಾತ್ರಿ ನುಡಿ ಇಲ್ಲವೇ ಕಾಲಜ್ಞಾನ ನುಡಿ ಎನ್ನಲಾಗುತ್ತದೆ. ಈ ನುಡಿ ಆಲಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಅಸಂಖ್ಯಾತ ಭಕ್ತಾದಿಗಳು ಆಗಮಿಸುತ್ತಾರೆ. ಈ ವರ್ಷದ ಮಹಾ ಶಿವರಾತ್ರಿ ದಿನವಾದ ಶುಕ್ರವಾರ ರಾತ್ರಿ ಕೊಡೇಕಲ್​ನ ಬಸವ ಪೀಠಾಧಿಪತಿ ಮಹಲಿಮಠದ ಶ್ರೀ ವೃಷಭೇಂದ್ರ ಅಪ್ಪನವರ ಸಾನ್ನಿಧ್ಯದಲ್ಲಿ ಕಾಲಜ್ಞಾನ ವಚನದ ಹೊತ್ತಿಗೆ ಹೊರತೆಗೆಯಲಾಗುತ್ತದೆ

ಪವನ್ ದೇಶಪಾಂಡೆ ಕೊಡೇಕಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net