

ಅಚ್ಚಿಗವೇಕಯ್ಯ? ಸಂಸಾರದೊಳಗಿರ್ದು
ನಿಚ್ಚ ನಿಚ್ಚ ಶಿವರಾತ್ರಿಯ ಮಾಡುವುದು.
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು!
ಬೇಗ ಬೇಗ ಕೂಡಲಸಂಗನ ಕೂಡುವುದು!
ಭಕ್ತಿಯ ಪಥವನ್ನು ವೈಚಾರಿಕ ನೆಲೆಯಲ್ಲಿ ವಿಶ್ಲೇಷಿಸಿದವರು ಸಂತ ಗುರು ಬಸವಣ್ಣನವರು. ನಮ್ಮ ಭಕ್ತಿಯ ಪ್ರತಿಯೊಂದು ಆಚರಣೆಯೂ ಜ್ಞಾನಯುತ ಹಾದಿಯಲ್ಲಿ ಸಾಗುವುದರ ಮೂಲಕ ನಮ್ಮ ಅಂತಃಕರಣಗಳು ಶುದ್ಧಿಯಾಗಬೇಕು ಎಂದು ಭಕ್ತಿಯ ಸಂದೇಶವನ್ನು ಲೋಕಕ್ಕೆ ಉಪದೇಶಿಸಿದ ಶ್ರೇಷ್ಠತೆ ಅವರದು.
ಮಹಾಶಿವರಾತ್ರಿಯ ದಿನದಂದು ಸಾಮಾನ್ಯವಾಗಿ ಶಿವನನ್ನು ಭಕ್ತಿಯಿಂದ ಆರಾಧಿಸುವುದನ್ನು ನಾವು ಕಾಣುತ್ತೇವೆ. ಪರಶಿವನ ಕುರಿತ ಭಕ್ತಿ, ಶಿವರಾತ್ರಿಯ ದಿನಕ್ಕೆ ಮಾತ್ರ ಸೀಮಿತವಾಗಿರದೆ ನಿಚ್ಚ ನಿಚ್ಚ ಶಿವರಾತ್ರಿಯಾಗಬೇಕೆಂದು ಬಸವಣ್ಣನವರು ಬಯಸುತ್ತಾರೆ. ಪರಶಿವನನ್ನು ಜ್ಞಾನಮಯ ಭಕ್ತಿಯ ಪಥದ ಮೂಲಕ ಆರಾಧಿಸಬೇಕು. ಜ್ಞಾನಯುತ ಹಾದಿಯ ಮೂಲಕ ಪರಶಿವನನ್ನು ಕಾಣಬೇಕು. ಆ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಅವರು ಉಪದೇಶಿಸಿದ್ದಾರೆ.
ಅಶಾಶ್ವತವಾದ ವಿಷಯ ಪ್ರಪಂಚದಲ್ಲಿಯೇ ಆಸಕ್ತಗೊಂಡಿರುವ ಮನಸ್ಸನ್ನು ಹೊರತಂದು, ತನ್ನ ಅಂತರಂಗದಲ್ಲಿಯೇ ಅಂತರ್ಗತಗೊಂಡಿರುವ ಪರಶಿವನನ್ನು (ಪರಮಾತ್ಮ) ಅರಿಯುವ ಪ್ರಯತ್ನ ಮಾಡುವುದೇ ಬದುಕಿನ ನಿಜ ಸಾರ್ಥಕತೆ ಎನ್ನುವುದು ಅವರ ವಚನದ ಸಂದೇಶ. ಸಹಜವಾಗಿ ನಮ್ಮ ಮನಸ್ಸು ಸಂಸಾರದ ವ್ಯಾಮೋಹದಿಂದ ಬಂಧಿಸಲ್ಪಟ್ಟಿರುತ್ತದೆ. ಸಂಸಾರ ಎಂದರೆ ನಾವು ತಿಳಿದಿರುವ ಹಾಗೆ ಮನೆ, ಹೆಂಡತಿ, ಮಕ್ಕಳು ಮತ್ತು ಬಂಧುಗಳಿಂದ ಆವರಿಸಲ್ಪಟ್ಟಿರುವ ಸಂಸಾರವಲ್ಲ! ಅನಾತ್ಮವಾದ ವಿಷಯಪ್ರಪಂಚದ ವಸ್ತುಗಳನ್ನು ಸತ್ಯ ಎಂದು ತಿಳಿದಿರುವುದೇ ಯಥಾರ್ಥ ದೃಷ್ಟಿಯಲ್ಲಿ ಸಂಸಾರ ಎನಿಸಿದೆ.
ಯಾವುದು ಅಶಾಶ್ವತವೋ ಅವುಗಳನ್ನು ಶಾಶ್ವತ ಎಂದು ನಂಬಿದ್ದೇವೆ. ಸೃಷ್ಟಿಯ ಪ್ರತಿಯೊಂದಕ್ಕೂ ಮುಖ್ಯ ಅಧಿಷ್ಠಾನವಾಗಿರುವಂತಹ ಪರಮ ಸತ್ಯವನ್ನು ಮರೆತಿರುವ ನಮ್ಮ ಮರೆಹುವೇ ಸಂಸಾರ ಎನಿಸಿಕೊಂಡಿದೆ. ‘ಸಂಸಾರವೆಂಬುದೊಂದು ಗಾಳಿಯ ಸೊಡರು, ಇದನ್ನು ನಂಬಿ ಕೆಡಬೇಡ’ ಎಂದು ಬಸವಣ್ಣನವರು ನಮ್ಮೆಲ್ಲರನ್ನೂ ಎಚ್ಚರಿಸುತ್ತಾರೆ. ಸಂಸಾರದಲ್ಲಿದ್ದೂ, ಇಲ್ಲದಂತಹ ಯೋಗದೃಷ್ಟಿಯನ್ನು ನಾವು ಬೆಳೆಸಿಕೊಳ್ಳಬೇಕೆಂದು ತಿಳಿಸಿದ್ದಾರೆ. ನಿಚ್ಚ ನಿಚ್ಚ ಅಂದರೆ ಮನಸ್ಸಿನ ಪ್ರತಿಯೊಂದು ಭಾವತರಂಗದಲ್ಲಿಯೂ ನಿಜಸತ್ಯವಾದ ಪರಮಾತ್ಮ
ತತ್ತ ್ವನ್ನು ಅನುಸಂಧಾನಿಸಬೇಕು ಹಾಗೂ ಅದನ್ನು ಕಾಣುವ ಪ್ರಯತ್ನ ಮಾಡುವುದೇ ನಿಜಾರ್ಥದಲ್ಲಿ ಶಿವರಾತ್ರಿ ಎನ್ನುವುದು ಬಸವಣ್ಣನವರ ವಿಚಾರ.
ಮಡಕೆಯ ಮಾಡುವಡೆ ಮಣ್ಣೇ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೇ ಮೊದಲು,
ಶಿವಪಥವನರಿವಡೆ ಗುರುಪಾದವೇ ಮೊದಲು
ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು.
ಒಂದು ಮಡಕೆ ಮಾಡುವುದಕ್ಕೆ ಮೂಲಭೂತವಾಗಿ ಬೇಕಾಗಿರುವುದು ಮಣ್ಣು. ಅದೇ ರೀತಿ ಯಾವುದೇ ಆಭರಣವನ್ನು ತಯಾರು ಮಾಡಲು ಹೊನ್ನು ಮೂಲಭೂತ ವಸ್ತುವಾಗಿರುತ್ತದೆ. ಹಾಗೆಯೇ ಶಿವಪಥವನ್ನು ಅರಿಯಬೇಕಾದರೆ ಗುರುಪಥ ಮುಖ್ಯವಾಗಿರುತ್ತದೆ. ಭಗವಂತನನ್ನು ಅರ್ಥೈಸಿಕೊಳ್ಳುವ, ತನ್ನ ಅಂತರಂಗದಲ್ಲಿಯೇ ಅಂತರ್ಯಾಮಿಯಾಗಿರುವ ಭಗವಂತನನ್ನು ಕಾಣಬೇಕಾದರೆ ಒಬ್ಬ ಸಮರ್ಥ ಗುರುವಿನ ಅವಶ್ಯಕತೆ ಇರುತ್ತದೆ ಎನ್ನುತ್ತಾರೆ ಅವರು. ಪರಶಿವನನ್ನು ಕಾಣುವ ಹಾದಿಗೆ ಸದ್ಗುರು ಮುಖ್ಯ ಮಾರ್ಗದರ್ಶಕ. ಗುರುವಿನ ಮಾರ್ಗದರ್ಶನದ ದಿಕ್ಸೂಚಿ ಇಲ್ಲದೆ ಭಕ್ತ ಪರಮಾತ್ಮನನ್ನು ಕಾಣಲು ಸಾಧ್ಯವಿಲ್ಲ. ಹಾಗೆಯೇ ಶರಣರ ಅನುಭಾವದ ಪರಿಪೂರ್ಣತೆಯ ಸಂಗದಿಂದ ಪರಮಾತ್ಮನ ನಿಜ ನೆಲೆಯನ್ನು ಅರ್ಥೈಸಿಕೊಳ್ಳಲು ಸಾಧ್ಯ ಎನ್ನುವ ಅಭಿಪ್ರಾಯ ಅವರದು. ಅನವರತ ಪರಮಾತ್ಮನ ಅನುಸಂಧಾನದಲ್ಲಿಯೇ ತನ್ಮಯಗೊಂಡಿರುವವರು ಶರಣರು. ಅಂತರಂಗ ಮತ್ತು ಬಹಿರಂಗಗಳೆರಡನ್ನೂ ಶುದ್ಧೀಕರಿಸಿಕೊಂಡು ಜಂಗಮಮುಖಿ ಕಾರ್ಯದಲ್ಲಿಯೇ ಭಗವಂತನ ನಿಜಾನುಭಾವವನ್ನು ಅನುಭಾವಿಸುತ್ತಿ ರುವ ಶರಣರ ಸಂಗದಲ್ಲಿಯೇ ಪರಮಾತ್ಮನ ನಿಜಾನುಭಾವದ ಅನುಭೂತಿಯನ್ನು ಕಾಣಬಹುದೆಂದು ಬಸವಣ್ಣನವರು ಅರ್ಥೈಸುತ್ತಾರೆ. ಶರಣರ ಸತ್ಸಂಗ ಎಲ್ಲಕ್ಕಿಂತ ಮಿಗಿಲು ಎನ್ನುವ ಸಂದೇಶವನ್ನು ಭಕ್ತಸಮೂಹಕ್ಕೆ ಉಪದೇಶಿಸಿರುವುದನ್ನು ಕಾಣಬಹುದು. ನಿಜಸತ್ಯದ ಅನುಭಾವದಲ್ಲಿರುವ ನಿಜಭಕ್ತರಲ್ಲಿಯೇ ಪರಮಾತ್ಮನು ಸ್ಥಾಯಿಯಾಗಿ ಉಳಿದಿರುತ್ತಾನೆ ಎನ್ನುವ ಸಂದೇಶವನ್ನು ವಿಶ್ಲೇಷಿಸಲಾಗಿದೆ.
ಕಾಯ ಮತ್ತು ಜೀವಭಾವಗಳನ್ನು ದಾಟಿ, ಎಲ್ಲದಕ್ಕೂ ಅಧಿಷ್ಠಾನವಾಗಿದ್ದುಕೊಂಡು, ತನಗೆ ಯಾವುದೇ ಆಧಾರವಿಲ್ಲದೆ ನಿತ್ಯಸತ್ಯವಾಗಿ ಬೆಳಗುತ್ತಿರುವ ಪರಮತತ್ತ ್ವ ಅನುಭಾವದಲ್ಲಿರುವ ಭಕ್ತರೇ ನಿಜಾರ್ಥದಲ್ಲಿ ಶರಣರೆನಿಸುತ್ತಾರೆ. ಭಗವಂತನ ಪರಮ ಭಕ್ತರ ಮುಖದರ್ಪಣದಲ್ಲಿಯೇ ಲಿಂಗವನ್ನು ಅಂದರೆ ಪರಮಾತ್ಮನನ್ನು ಕಾಣಬಹುದೆಂದು ಬಸವಣ್ಣನವರು ತಿಳಿಸುತ್ತಾರೆ.
ಎನಗಿಂತ ಕಿರಿಯರಿಲ್ಲ,
ಶಿವಭಕ್ತರಿಗಿಂತ ಹಿರಿಯರಿಲ್ಲ;
ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ,
ಕೂಡಲಸಂಗಮದೇವಾ, ಎನಗಿದೇ ದಿಬ್ಯ.
‘ಎನಗಿಂತ ಕಿರಿಯರಿಲ್ಲ’ ಎನ್ನುವ ಗುರು ಬಸವಣ್ಣನವರ ಈ ನುಡಿಯಲ್ಲಿ ‘ಎನಗಿಂತ’ ಎಂಬುದು ಒಂದು ಸೀಮಿತ ಕಕ್ಷೆಯ ಪರಿಧಿಯನ್ನು ವ್ಯಕ್ತಪಡಿಸುತ್ತದೆ. ನಾನೆಂಬ ಅಹಂಭಾವನೆಯು ಸ್ವಾರ್ಥತೆಯ ಸಂಕೇತ ಎನಿಸಿಕೊಳ್ಳುತ್ತದೆ. ಎನಗಿಂತ ಎನ್ನುವಂತಹ ನಾನೆಂಬ ದೇಹಭಾವದ ನಿಲುವಿನಲ್ಲಿ ಅಜ್ಞಾನ ಹಾಗೂ ವಿನಾಶತ್ವದ ಅಸ್ತಿತ್ವವಿದೆ. ಶಿವಭಕ್ತರಿಗಿಂತ ಹಿರಿದಾದುದು ಯಾವುದೂ ಇಲ್ಲ ಎನ್ನುವುದರಲ್ಲಿ ಜ್ಞಾನಕ್ಕಿಂತ ಹಾಗೂ ಭಗವಂತನ ಪರಮ ಜ್ಞಾನವನ್ನು ಅರ್ಥೈಸಿಕೊಂಡಿರುವ ಶರಣರ ಅನುಭಾವಕ್ಕೆ ಯಾವುದೂ ಸರಿಸಮಾನವಾದುದು ಇಲ್ಲ ಎಂಬುದನ್ನು ಅಭಿವ್ಯಕ್ತಿಸುತ್ತದೆ. ಶಿವಭಕ್ತರು ಎಂದರೆ ಜೀವಭಾವಗಳನ್ನು ದಾಟಿ, ಪರಶಿವನಲ್ಲಿ ತಾದಾತ್ಮ್ಯನ್ನು ಸಂಪಾದಿಸಿದವರು ಎಂದರ್ಥ. ಅನುಕಾಲವೂ ಭಗವಂತನಲ್ಲದೆ ಅನ್ಯ ವಿಷಯದೆಡೆಗೆ ಮನ ಹರಿಯದಂತಹ ನಿರ್ವಿಕಲ್ಪ ಯೋಗಸ್ಥಿತಿಯಲ್ಲಿ ಭಗವಂತನ ನಿಜಾನುಭಾವವನ್ನು ಅನುಭಾವಿಸಿದವರು ಶಿವಭಕ್ತರೆನಿಸುತ್ತಾರೆ.
ಪರಶಿವನ ಅಂದರೆ ಭಗವಂತನ ನಿಜ ನಿಲುವಿನ ಪರಮಾನಂದದಲ್ಲಿ ವಿಹರಿಸಿದವರು ಶಿವಭಕ್ತರು ಅಥವಾ ಶರಣರು ಎನಿಸಿಕೊಳ್ಳುತ್ತಾರೆ. ಅಂತಹ ಶಿವಭಕ್ತರು ನಿಜಾರ್ಥವಾಗಿ ಭಗವಂತನ ಸಾಕಾರ ರೂಪವೇ ಆಗಿರುತ್ತಾರೆ. ಅಂತಹ ಮಹಾನುಭಾವರು ನುಡಿದರೆ ಅದುವೇ ಸಿದ್ಧಾಂತ, ಎದ್ದು ಕುಳಿತರೆ ಶಿವರಾತ್ರಿ ಹಾಗೂ ನಿದ್ರಿಸಿದರೆ ಅದುವೇ ಭಗವಂತನ ಅನುಸಂಧಾನದ ಜಪ ಎನಿಸಿಕೊಳ್ಳುತ್ತದೆ. ಮಹಾತ್ಮರು, ಶರಣರು ಅಥವಾ ಶಿವಭಕ್ತರು ಏನನ್ನು ಬಯಸುತ್ತಾರೋ, ಯಾವುದನ್ನೂ ಅನುಗ್ರಹಿಸುವ ಸಂಕಲ್ಪ ಮಾಡುತ್ತಾರೋ ಅಥವಾ ಆಶೀರ್ವಾದ ನೀಡುತ್ತಾರೆಯೋ ಅದು ಭಗವಂತನಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇದಕ್ಕೆ ಮೃಕಂಡು ಮಹರ್ಷಿಯ ಅಲ್ಪಾಯುಷಿ ಮಗ ಮಾರ್ಕಂಡೇಯ ಚಿರಂಜೀವಿಯಾಗಿ ಭಕ್ತ ಮಾರ್ಕಂಡೇಯ ಎನಿಸಿಕೊಂಡ ದೃಷ್ಟಾಂತವೇ ಸಾಕ್ಷಿ. ಈ ಕಾರಣದಿಂದಲೇ ‘ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂದು ಬಸವಣ್ಣನವರು ತಿಳಿಸಿರುವುದು.
ಮಹಾಶಿವರಾತ್ರಿಯ ಈ ಸಂದರ್ಭದಲ್ಲಿ ಪರಶಿವನನ್ನು ಭಕ್ತಿ ಮತ್ತು ಜ್ಞಾನದ ಮೂಲಕ ಆರಾಧಿಸಬೇಕು. ಆ ಮೂಲಕ ಶಿವರಾತ್ರಿಯ ಸಾರ್ಥಕತೆಯನ್ನು ಕಾಣಬೇಕು. ಮನಸ್ಸಿನ ತುಂಬೆಲ್ಲ ಪರಶಿವನ ಚಿಂತನೆಯನ್ನು ರೂಪಿಸಿಕೊಳ್ಳುವುದೇ ಅರ್ಥಪೂರ್ಣ ಶಿವರಾತ್ರಿಯಾಗಿದೆ.
ಯೋಗೀಶ್ ನಿರ್ವಿಕಲ್ಪ ಶಿವಮೊಗ್ಗ