ತಾರಕ ರತ್ನ ಆರೋಗ್ಯದಲ್ಲಿ ಕೊಂಚ ಚೇತರಿಕೆ; ನಾರಾಯಣ ಹೃದಯಾಲಯಕ್ಕೆ ಭೇಟಿ ಕೊಟ್ಟ ಶಿವಣ್ಣ

Tarak Ram - Shivarajkumar
Published on

ಆನೇಕಲ್: ಹೃದಯಾಘಾತದಿಂದ ಚಿಕಿತ್ಸೆ ಪಡೆಯುತ್ತಿರುವ ತೆಲುಗು ನಟ ಮತ್ತು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್​.ಟಿ. ರಾಮರಾವ್ ಅವರ ಮೊಮ್ಮಗ ತಾರಕ್​ ರತ್ನ ಅವರ ಆರೋಗ್ಯ ವಿಚಾರಿಸಲು ಶಿವರಾಜಕುಮಾರ್​, ನಾರಾಯಣ ಹೃದಯಾಲಯಕ್ಕೆ ಭೇಟಿ ನೀಡಿದ್ದಾರೆ.

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಶುಕ್ರವಾರ ನಡೆದ ರಾಜಕೀಯ ಪಾದಯಾತ್ರೆಯಲ್ಲಿ ತಾರಕ್​ ರತ್ನ ಹೃದಯಾಘಾತದಿಂದ ಕುಸಿದುಬಿದ್ದಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಿ, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಭಾನುವಾರ ಬೆಳಿಗ್ಗೆ ನಾರಾಯಣ ಹೃದಯಾಲಯಕ್ಕೆ ಭೇಟಿ ಕೊಟ್ಟ ಶಿವರಾಜಕುಮಾರ್​, ತಾರಕ್​ ರತ್ನ ಅವರ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು. ನಂತರ ಹೊರಗೆ ನೆರೆದಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾರಕ್​ ರತ್ನ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬರುತ್ತಿದೆ ಎಂದು ಹೇಳಿದರು.

ಈ ಕುರಿತು ಮಾತನಾಡಿರುವ ಅವರು, 'ತಾರಕ ರತ್ನ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬರುತ್ತಿದೆ. ಕಣ್ಣುಗಳ ಚಲನೆ ಕಂಡು ಬರುತ್ತಿದೆ. ಸದ್ಯ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ವೈದ್ಯರು ಪ್ರಯತ್ನ ಮುಂದುವರಿಸಿದ್ದಾರೆ. ಚಿಕಿತ್ಸೆಗೆ ತಾರಕ್ ಸ್ಪಂದಿಸುತ್ತಿದ್ದಾರೆ. ಆದಷ್ಟು ಬೇಗ ಆರೋಗ್ಯದಲ್ಲಿ ಚೇತರಿಕೆ ಭರವಸೆ ಇದೆ. ಒಂದು ಕುಟುಂಬವಾಗಿ ನಾನು ಇಲ್ಲಿಗೆ ಬಂದಿದ್ದೇನೆ' ಎಂದು ಶಿವರಾಜಕುಮಾರ್​ ಹೇಳಿದರು. ಈ ಸಂದರ್ಭದಲ್ಲಿ ಅವರೊಂದಿಗೆ ತೆಲುಗಿನ ಹಿರಿಯ ನಟ ನಂದಮೂರಿ ಬಾಲಕೃಷ್ಣ ಸಹ ಹಾಜರಿದ್ದರು.

ಇದಕ್ಕೂ ಮುನ್ನ ತಾರಕ್​ ರತ್ನ ಅವರ ಆರೋಗ್ಯ ವಿಚಾರಿಸಲು ಟಾಲಿವುಡ್​ ನಟ ಜ್ಯೂನಿಯರ್​ ಎನ್​.ಟಿ.ಆರ್​ ಮತ್ತು ಡಾ.ಕೆ. ಸುಧಾಕರ್​ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net