

ಶಿವಮೊಗ್ಗ: ಒಳ ಮೀಸಲಾತಿ ಸಂಬಂಧ ರಚನೆಯಾಗಿದ್ದ ನಿವೃತ್ತ ನ್ಯಾ. ಎಚ್.ನಾಗಮೋಹನ್ ದಾಸ್ ಆಯೋಗಕ್ಕೆ ತುರ್ತು ಮಧ್ಯಂತರ ವರದಿ ನೀಡಲು ಆದೇಶಿಸುವಂತೆ ರಾಜ್ಯ ಸರ್ಕಾರವನ್ನು ಮಾದಿಗ-ಸಮಗಾರ-ಡೋಹರ-ದಕ್ಕಲಿಗ ಜಾತಿ, ಉಪಜಾತಿ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಶಿವಪ್ಪ ಒತ್ತಾಯಿಸಿದರು.
ಆಯೋಗಕ್ಕೆ ನೀಡಿದ್ದ ಹೆಚ್ಚುವರಿ ಅವಧಿ ಜ.31ಕ್ಕೆ ಮುಕ್ತಾಯವಾಗಲಿದೆ. ಮತ್ಯಾವುದೇ ಕಾರಣಕ್ಕೂ ಕಾಲಾವಕಾಶ ವಿಸ್ತರಣೆ ಮಾಡಬಾರದು. ಒಂದು ವೇಳೆ ವಿಸ್ತರಣೆ ಮಾಡಿದರೆ ಮಾದಿಗ ಸಂಘಟನೆಗಳು ಮತ್ತು ಒಳ ಮೀಸಲಾತಿ ಹೋರಾಟಗಾರರು ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಹೊಸ ಆಯೋಗ ರಚನೆ ಮಾದಿಗ ಸಂಘಟನೆಗಳು, ಒಳ ಮೀಸಲಾತಿ ಹೋರಾಟಗಾರರ ಬೇಡಿಕೆ ಆಗಿರಲಿಲ್ಲ. ಈಗಾಗಲೇ ಸರ್ಕಾರದ ಮುಂದೆ ನ್ಯಾ. ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ, 2011ರ ಜನಗಣತಿ ದತ್ತಾಂಶಗಳಿವೆ. ಈ ನಡುವೆ ನ್ಯಾ. ನಾಗಮೋಹನ್ ದಾಸ್ ಅವರಿಗೆ ಕೊಟ್ಟಿದ್ದ ಒಂದು ತಿಂಗಳ ಕಾಲಮಿತಿಯನ್ನು ಮತ್ತೆ ವಿಸ್ತರಿಸುವ ಹುನ್ನಾರ ನಡೆಯುತ್ತಿದೆ. ಸರ್ಕಾರವನ್ನು ನಿಯಂತ್ರಿಸುತ್ತಿರುವ ಕೆಲ ಒಳ ಮೀಸಲಾತಿ ವಿರೋಧಿ ಶಕ್ತಿಗಳು ಆಯೋಗಕ್ಕೆ ಮತ್ತಷ್ಟು ಕಾಲಾವಕಾಶ ಕೊಡಬೇಕು ಎನ್ನುವ ಮಾತು ಹರಿಬಿಟ್ಟಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ತುರ್ತಾಗಿ ಮಧ್ಯಂತರ ವರದಿಗೆ ಆದೇಶಿಸಬೇಕು. ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪು ಬಂದ ಒಂದೇ ತಿಂಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸಿದೆ. ಅದೇ ರೀತಿ ಕರ್ನಾಟಕ ಸರ್ಕಾರ ಕೂಡ ಕಾಲಹರಣ ಮಾಡದೆ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಸಂಘಟನಾ ಕಾರ್ಯದರ್ಶಿ ಕೆ.ಎನ್.ಅಶೋಕಕುಮಾರ್, ಚನ್ನವೀರಪ್ಪ ಗಾಮನಗಟ್ಟಿ, ಎಚ್.ಎನ್.ಶ್ರೀನಿವಾಸ್, ಎಸ್.ಹನುಮಂತರಾಯ್, ರವಿ ಸುದ್ದಿಗೋಷ್ಠಿಯಲ್ಲಿದ್ದರು.