45 Movie Review - ಮಾಡರ್ನ್​ ಪುರಾಣದಲ್ಲಿ ಸಾವು ಬದುಕಿನ ಲೆಕ್ಕಾಚಾರ

45
45
Published on
45 Movie Review - ಉಪ್ಪಿ ಉಗ್ರಾವತಾರ, ವಿಶ್ವರೂಪದಲ್ಲಿ ಶಿವ ತಾಂಡವ
ಚಿತ್ರ: 45
ನಿರ್ದೇಶನ: ಅರ್ಜುನ್​ ಜನ್ಯ
ನಿರ್ಮಾಣ: ರಮೇಶ್​ ರೆಡ್ಡಿ
ತಾರಾಗಣ: ಶಿವರಾಜಕುಮಾರ್​, ಉಪೇಂದ್ರ, ರಾಜ್​ ಬಿ. ಶೆಟ್ಟಿ, ಕೌಸ್ತುಭ ಮಣಿ, ಪ್ರಮೋದ್​ ಶೆಟ್ಟಿ, ಮಾನಸಿ ಸುಧೀರ್​, ಸುಧಾರಾಣಿ ಮತ್ತಿತರರು
ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಚೊಚ್ಚಲ ಬಾರಿಗೆ ನಿರ್ದೇಶನದಲ್ಲಿ, ಶಿವರಾಜಕುಮಾರ್​, ಉಪೇಂದ್ರ ಮತ್ತು ರಾಜ್​ ಬಿ. ಶೆಟ್ಟಿ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವ ಕಾರಣ "45' ಬಗ್ಗೆ ಪ್ರಾರಂಭದಿಂದಲೂ ನಿರೀೆಗಳಿದ್ದವು. ಟೈಟಲ್​, ಟೀಸರ್​, ಟ್ರೇಲರ್​ ಸಿನಿಮಾ ಕುರಿತ ಕುತೂಹಲ ಇನ್ನಷ್ಟು, ಮತ್ತಷ್ಟು ಹೆಚ್ಚಿಸಿದ್ದವು. ಅಭಿಮಾನಿಗಳು "45' ಅಂದರೆ ಇದೇ ಸ್ಟೋರಿ, ಇದೇ ಕಾನ್ಸೆಪ್ಟ್​ ಅಂತ ಲೆಕ್ಕಾಚಾರದಲ್ಲಿ ತೊಡಗಿದ್ದರು. ಹಾಗಾದರೆ ನಿಜವಾಗಲೂ "45' ಎಂದರೇನು?
ಆತ ವಿನಯ್​ (ರಾಜ್​). ಎಂಎನ್​ಸಿಯಲ್ಲಿ ಕೆಲಸ ಮಾಡುವ ಸಿಂಪಲ್​ ಯುವಕ. ಅಮ್ಮ (ಮಾನಸಿ), ಗರ್ಲ್​್ರೆಂಡ್​ ಮೇನಾ (ಕೌಸ್ತುಭ) ಬಿಟ್ಟರೆ ಆತನ ಜೀವನದಲ್ಲಿ ಬೇರಾರಿಲ್ಲ. ಹೀಗಿರುವಾಗ ಒಮ್ಮೆ ಹೆಲ್ಮೆಟ್​ ಧರಿಸದೇ ಬೈಕ್​ನಲ್ಲಿ ಕೆಲಸಕ್ಕೆ ಹೊರಡುವ ವಿನಯ್​, ೋನ್​ನಲ್ಲಿ ಮಾತನಾಡುತ್ತಾ ಹೋಗುವಾಗ ಶ್ವಾನಕ್ಕೆ ಡಿಕ್ಕಿ ಹೊಡೆದು ಸಾಯಿಸಿಬಿಡುತ್ತಾನೆ. ರೋಸಿ ಹೆಸರಿನ ಆ ಶ್ವಾನದ ಮಾಲೀಕನೇ ರಾಯಪ್ಪ (ಉಪೇಂದ್ರ). "ನೀನು ಕೊಂದಿದ್ದು ನಾಯಿಯನ್ನಲ್ಲ, ನನ್ನ ತಾಯಿಯನ್ನ. ಹೀಗಾಗಿ ಇವತ್ತಿನಿಂದ 45ನೇ ದಿನ ನಿನ್ನನ್ನು ಕೊಲ್ಲುತ್ತೇನೆ' ಎಂದು ವಿನಯ್​ ಹಿಂದೆ ಬೀಳುತ್ತಾನೆ. ಸಿನಿಮಾ ರಿಲೀಸ್​ ದಿನಾಂಕ ಘೋಷಿಸಿದಂತೆ, ತನ್ನ ಮರಣದಿನವನ್ನೂ ಘೋಷಿಸಿಬಿಟ್ಟನಲ್ಲಾ ಅಂತ ವಿನಯ್​, ಜೀವ ಉಳಿಸಿಕೊಳ್ಳಲು ಇನ್ನಿಲ್ಲದ ಪರಿಪಾಟಲು ಪಡುತ್ತಾನೆ. ಅದಾಗಿ 25 ದಿನಗಳಲ್ಲಿ ವಿನಯ್​ಗೆ ಶಿವಪ್ಪನ ಪರಿಚಯವಾಗುತ್ತದೆ. ಅಲ್ಲಿಂದ ರಾಯಪ್ಪ ಮತ್ತು ಶಿವಪ್ಪನ ಇತಿಹಾಸದ ಪುಟ ತೆರೆದುಕೊಂಡು ಕಥೆಗೆ ಹೊಸ ರೂಪ, ವೇಗ, ಹೊಸ ಆಯಾಮ ದೊರೆಯುತ್ತದೆ. ಅದು ಹೇಗೆ? ಶಿವಪ್ಪ ಯಾರು? ರಾಯಪ್ಪ ಯಾರು? ಅವರಿಬ್ಬರ ಹಿನ್ನೆಲೆಯೇನು? ವಿನಯ್​ ಭವಿಷ್ಯವೇನು? ಸಿನಿಮಾ ನೋಡಿ.
ನಾವು ಸತ್ತ ಬಳಿಕ ಏನಾಗುತ್ತೇವೆ? ಗರುಡಪುರಾಣದಲ್ಲಿ ಏನಿದೆ? ಹುಟ್ಟು ಮತ್ತು ಸಾವು ಎರಡೂ ಸಾರ್ವಕಾಲಿಕ ಸತ್ಯಗಳು. ಅವುಗಳ ನಡುವೆ ನಾವು ಮಾಡುವ ಒಳ್ಳೆಯ ಮತ್ತು ಕೆಟ್ಟ ಕರ್ಮಗಳೇ, ನಮ್ಮ ಸಾವಿನ ಬಳಿಕ ಆತ್ಮದ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬ ಸಂದೇಶವನ್ನು "45' ಮೂಲಕ ಸರಳವಾಗಿ ದಾಟಿಸಿದ್ದಾರೆ ಅರ್ಜುನ್​ ಜನ್ಯ. ಆತ್ಮ, ಆಧ್ಯಾತ್ಮ, ಪುರಾಣ, ಸಾವು, ಬದುಕು, ಪ್ರೀತಿ, ಸೆಂಟಿಮೆಂಟ್​, ಆ್ಯಕ್ಷನ್​, ಚೇಸ್​, ಗೆಳೆತನ, ಭಕ್ತಿ, ದ್ವೇಷ... ಹೀಗೆ ಎಲ್ಲ ಅಂಶಗಳನ್ನೂ ಸೇರಿಸಿ ಮೊದಲ ಪ್ರಯತ್ನದಲ್ಲೇ ಅದ್ಭುತವೊಂದನ್ನು ತೆರೆಯ ಮೇಲೆ ಸೃಷ್ಟಿಸಿದ್ದಾರೆ. ಉಪೇಂದ್ರ ಉಗ್ರಾವತಾರ, ವಿಶ್ವರೂಪಗಳಲ್ಲಿ ಶಿವಣ್ಣ ತಾಂಡವ ಚಿತ್ರದ ಹೈಲೈಟ್​. ಒಂದು ಚೇಸ್​ ಹಾಲಿವುಡ್​ ಸಿನಿಮಾಗಳನ್ನು ನೆನಪಿಸಿದರೆ, ಕ್ಲೆಮ್ಯಾಕ್ಸ್​ ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ಅದಕ್ಕೆ ಪೂರಕವಾದ ಅರ್ಜುನ್​ ಜನ್ಯ ಹಿನ್ನೆಲೆ ಸಂಗೀತ, ಚಿತ್ರವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿವೆ. ಶಿವಣ್ಣ ಮತ್ತು ಸುಧಾರಾಣಿ ನಡುವಿನ ಮಾತು, "ಓಂ', ಲಾಂಗ್​ ಕುರಿತ ಸಂಭಾಷಣೆ, ಶಿವಣ್ಣ ಅಣ್ಣಾವ್ರ ಮಿಮಿಕ್ರಿ ಮಾಡುವುದು, "ಸೋಜುಗದ ಸೂಜಿಮಲ್ಲಿಗೆ...' ಹಾಡಿನ ಬಳಕೆ, ಐ ಯಾಮ್​ ಗಾಡ್​ ಗಾಡ್​ ಈಸ್​ ಗ್ರೇಟ್​ ಡೈಲಾಗ್​... ಹೀಗೆ ಚಿತ್ರದಾದ್ಯಂತ ಅಲ್ಲಲ್ಲಿ ಕ್ಲಾಸಿಕ್​ ಸಿನಿಮಾಗಳ ಝಲಕ್​ ಇಣುಕು ಹಾಕಿವೆ. ವಿಎ್​ಎಕ್ಸ್​ ಬಹುತೇಕ ಕಡೆಗಳಲ್ಲಿ ಮೋಡಿ ಸೃಷ್ಟಿಸಿದ್ದರೂ, ಕೆಲವೆಡೆ ಮತ್ತಷ್ಟು ಪರಿಣಾಮಕಾರಿಯಾಗಿದ್ದರೆ ಪ್ರೇಕ್ಷಕರಿಗೆ ಇನ್ನಷ್ಟು ಇಷ್ಟವಾಗುತ್ತಿತ್ತು. ಕಂಟೆಂಟ್​ ಪ್ರಧಾನ ಕಮರ್ಷಿಯಲ್​ "45' ಮನರಂಜನೆಯ ಕಂಪ್ಲೀಟ್​ ಪ್ಯಾಕೇಜ್​ ಎಂದರೂ ತಪ್ಪಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net