

ಬೆಂಗಳೂರು: ವ್ಯಾಪಕ ಪ್ರಗತಿಯ ಸಕ್ಕರೆ ಉದ್ಯಮಕ್ಕೆ ಸ್ಪಷ್ಟ ಚೌಕಟ್ಟು ರೂಪಿಸುವುದು, ಕಬ್ಬು ಬೆಳೆಗಾರರ ಹಿತರಕ್ಷಣೆ, ಕಬ್ಬು ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿ ಸೇರಿದಂತೆ ಈ ಕ್ಷೇತ್ರದ ವಿಸ್ತರಣೆಯ ದೂರದೃಷ್ಟಿಯ ಸಕ್ಕರೆ ನಿಯಂತ್ರಣ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವಿಜಯವಾಣಿ ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಈ ವಿಚಾರವನ್ನು ಪ್ರಸ್ತಾಪಿಸಿದರು. ನಿಯಮ ಪಾಲಿಸದ ಸಕ್ಕರೆ ಕಾರ್ಖಾನೆಗಳು, ಕಬ್ಬು ಬೆಳೆಗಾರರ ಸಮಸ್ಯೆ, ಬಾಕಿ ಪಾವತಿ, ಕಾರ್ಖಾನೆಗಳ ಸಮಸ್ಯೆ ಕುರಿತು ವಿಸ್ತಾರವಾಗಿ ರ್ಚಚಿಸಿದರು.
ಲಕ್ಷಾಂತರ ಟನ್ ಕಬ್ಬು ಅರೆಯುವ ಕಾರ್ಖಾನೆಗಳನ್ನು ನಿಯಂತ್ರಿಸುವುದು ಕಷ್ಟವಿದೆ. ಬಹಳಷ್ಟು ಪ್ರಭಾವಿಗಳೇ ಇದ್ದಾರೆ. ಈ ಹಿಂದೆ 32-33 ಸಹಕಾರಿ ಕಾರ್ಖಾನೆಗಳಿಗೆ ಅಧ್ಯಕ್ಷರಾಗಿದ್ದ ರಾಜಕಾರಣಿಗಳು ಕಾರ್ಖಾನೆ ಸೊರಗಿಸಿದರು, ಅವರ ಸ್ವಂತ ಕಾರ್ಖಾನೆಗಳು ಬೆಳೆದವು ಎಂದು ಸಚಿವರು ಸೂಚ್ಯವಾಗಿ ತಿಳಿಸಿದರು. ಸಕ್ಕರೆ ಉದ್ಯಮ ದೇಶಕೆ್ಕೆ ಬೆನ್ನೆಲುಬು ಎಂಬಂತಿದೆ. ಒಂದು ಕಾಲದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಸರ್ಕಾರಕ್ಕೆ ಮಾತ್ರ ಸಾಧ್ಯವಿತ್ತು, ಕಾಲಕ್ರಮೇಣ ಸರ್ಕಾರಿ ಸ್ವತ್ತುಗಳನ್ನು ಉದ್ಯಮಿಗಳಿಗೆ ಲೀಸ್ ಕೊಡುವ ಪರಿಪಾಠ ಬೆಳೆದು, ಸರ್ಕಾರಕ್ಕೆ ಪೈಸೆ ಲಾಭವಿಲ್ಲದಂತಾಗಿದೆ ಬೇಸರಿಸಿದರು.
ಸಕ್ಕರೆ ಕಾರ್ಖಾನೆಗಳ ವಿರುದ್ಧ ಸಾಕಷ್ಟು ಆರೋಪಗಳಿವೆ. ಆದರೆ, ಯಾರೂ ನಿರ್ದಿಷ್ಟ ದೂರು ಕೊಡುತ್ತಿಲ್ಲ. ದೂರು ಕೊಟ್ಟರೆ ಖಂಡಿತ ಕ್ರಮಕೈಗೊಳ್ಳುತ್ತೇವೆ. ಕಾರ್ಖಾನೆಯವರು ಎಷ್ಟೇ ದೊಡ್ಡವರಾಗಿದ್ದರೂ ಬಿಡುವುದಿಲ್ಲ ಎಂದ ಅವರು, ತೂಕದಲ್ಲಿ ಲೋಪ, ಇಳುವರಿ ನಿಗದಿ ಅಥವಾ ಇನ್ಯಾವುದೇ ರೀತಿಯ ಸಮಸ್ಯೆ ಬಗ್ಗೆ ದೂರು ಕೊಡಲು ಧೈರ್ಯ ತೋರಬೇಕಷ್ಟೇ ಎಂದು ಹೇಳಿದರು.
ತೂಕ ಮತ್ತು ಅಳತೆಯನ್ನು ಕಾನೂನು ಮಾಪನಶಾಸ್ತ್ರ ಇಲಾಖೆ ನೋಡಿಕೊಳ್ಳಲಿದೆ, ಮಾಲಿನ್ಯ ನಿಯಂತ್ರಣ ಕೂಡ ನಮ್ಮ ಇಲಾಖೆಗೆ ವ್ಯಾಪ್ತಿಯಲ್ಲಿ ಬರಲ್ಲ. ಇನ್ನು, ಕೆಲವು ವಿಚಾರ ಆರೋಗ್ಯ ಇಲಾಖೆಗೆ ವ್ಯಾಪ್ತಿಗೆ ಬರಲಿದೆ. ಹೀಗಾಗಿ ಸಮಗ್ರ ನಿಯಂತ್ರಣ ವ್ಯವಸ್ಥೆ ಅಗತ್ಯವಿದೆ, ಇದನ್ನು ಸಾಧಿಸುತ್ತೇವೆ ಎಂದು ಪ್ರತಿಪಾದಿಸಿದರು.
ಎಫ್ಆರ್ಪಿ ಕೊಡಿಸುವುದರಲ್ಲಿ ದೇಶದಲ್ಲಿ ನಾವೇ ಮೊದಲಿದ್ದೇವೆ. ಹೆಚ್ಚು ಕಬ್ಬು ಬೆಳೆಯುವ ಉತ್ತರ ಪ್ರದೇಶ, ಮಹಾರಾಷ್ಟ್ರವೂ ಹಿಂದಿದೆ. ರಾಜ್ಯದಲ್ಲಿ -ಠಿ;20 ಸಾವಿರ ಕೋಟಿ ಪಾವತಿಯಲ್ಲಿ ಕೇವಲ -ಠಿ;64 ಕೋಟಿ ಪಾವತಿಯಾಗಬೇಕಿದೆ. ಶೇ.99ರಷ್ಟು ಪಾವತಿಯಾಗಿದೆ ಎಂದು ಅಂಕಿ-ಅಂಶ ಹಂಚಿಕೊಂಡರು.
ಪ್ರತಿ ಕಾರ್ಖಾನೆಯಿಂದ ಪ್ರತ್ಯಕ್ಷ- ಪರೋಕ್ಷ ವಾಗಿ ಹತ್ತು ಸಾವಿರ ಉದ್ಯೋಗ ಒದಗಲಿದೆ. ವರ್ಷದಲ್ಲಿ 150 ದಿನ ಕೆಲಸವೂ ಸಿಗಲಿದೆ. ನಿಯಮ ಬದ್ಧವಾಗಿ ನಡೆದರೆ ಹೆಚ್ಚು ಉದ್ಯೋಗ ಸೃಷ್ಟಿ ಸಾಧ್ಯ. ಕಾರ್ಖಾನೆಗಳು ವ್ಯಾಪ್ತಿಯ ಹೊರತಾದ ಪ್ರದೇಶದಿಂದ ಕಬ್ಬನ್ನು ತರಿಸಿಕೊಂಡು ಅರೆಸುತ್ತಿವೆ. ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪೋ›ತ್ಸಾಹ ಕೊಡಬೇಕು, ಅವರೂ ಬೆಳೆಯಬೇಕು, ಜತೆಗೆ ಮಣ್ಣಿನ ಆರೋಗ್ಯ ರಕ್ಷಣೆಗೂ ರೈತರು ಆದ್ಯತೆ ಕೊಡಬೇಕು, ಇದಕ್ಕೆ ಕಾರ್ಖಾನೆಗಳೂ ನೆರವಾಗಬೇಕು. ಇದಿಷ್ಟೇ ಅಲ್ಲದೇ, ಉಪ ಉತ್ಪನ್ನದ ಲಾಭವನ್ನು ರೈತರಿಗೂ ಕೊಡಬೇಕು. ಸಕ್ಕರೆ ಬಿಡುಗಡೆ ಮೇಲೆಯೂ ಸರ್ಕಾರಕ್ಕೆ ನಿಯಂತ್ರಣ ಇರಬೇಕಾಗುತ್ತದೆ. ಇದೆಲ್ಲ ಅಂಶವನ್ನು ಒಳಗೊಂಡಂತೆ ಸಕ್ಕರೆ ನಿಯಂತ್ರಣ ಕಾಯ್ದೆ ಜಾರಿಗೆ ತರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಪಾಟೀಲ ವಿವರಿಸಿದರು.
ರಾಜ್ಯದಲ್ಲಿ ವಾರ್ಷಿಕ 40 ಕೋಟಿ ಲೀಟರ್ನಷ್ಟು ಎಥೆನಾಲ್ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರದ ಸಹಕಾರ ಹೆಚ್ಚಿದೆ. ಅನೇಕ ರಿಯಾಯಿತಿ ಕೊಡುತ್ತಿದ್ದಾರೆ. ಇಂಧನದೊಂದಿಗೆ ಶೇ.20ವರೆಗೆ ಎಥೆನಾಲ್ ಮಿಶ್ರಣಕ್ಕೆ ಅವಕಾಶವಿದೆ. ಹೀಗಾಗಿ ಬೇಡಿಕೆ ಹೆಚ್ಚಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ರಾಜ್ಯದ 74ರ ಪೈಕಿ 34 ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದಿಸುತ್ತಿದ್ದು, ಎಂಟು ಕಾರ್ಖಾನೆಗಳು ಅನುಮತಿ ಪಡೆದಿವೆ ಎಂದು ಶಿವಾನಂದ ಹೇಳಿದರು.
ಕೇಂದ್ರ ಸರ್ಕಾರವೇ ಹಿಂಪಡೆದಿರುವ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ ಪರ ರಾಜ್ಯದಲ್ಲಿ ಉದ್ಯಮಪರ ಲಾಬಿಗಳು ಕೆಲಸ ಮಾಡುತ್ತಿವೆ ಎಂದು ಸಚಿವ ಶಿವಾನಂದ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ರೈತರ ಹಿತರಕ್ಷಣೆಗಾಗಿ ಈ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇದಕ್ಕೆ ಪ್ರತಿಪಕ್ಷಗಳು ಆಕ್ಷೇಪಿಸಿ ಸದನ ಪರಿಶೀಲನೆಗೆ ಒಪ್ಪಿಸಿದ್ದಕ್ಕೆ ಬೇಸರಿಸಿದರು.
ರೈತರ ಹಿತರಕ್ಷಣೆಗಾಗಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ಆದರೆ, ಉದ್ಯಮಪರ ಲಾಬಿ ಇದಕ್ಕೆ ತಡೆಯೊಡ್ಡಿದೆ ಎಂದು ವಿಜಯವಾಣಿ ಸಂವಾದದಲ್ಲಿ ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಕಿಡಿಕಾರಿದರು.
ಕಾಯ್ದೆ ತಿದ್ದುಪಡಿ ಮಸೂದೆಗೆ ಪ್ರತಿಪಕ್ಷಗಳು ಆಕ್ಷೇಪಿಸಿ ಸದನ ಪರಿಶೀಲನಾ ಸಮಿತಿಗೆ ಒಪ್ಪಿಸಿದ್ದಕ್ಕೆ ನೇರವಾಗಿ ಅಸಮಾಧಾನ ಹೊರಹಾಕಿದರು. ಈ ಕಾಯ್ದೆಯನ್ನು ಕೇಂದ್ರ ಸರ್ಕಾರವೇ ವಾಪಸ್ ಪಡೆದಿದೆ. ಒಂದೆರಡು ರಾಜ್ಯಗಳು ಬಿಟ್ಟರೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಹಿಂಪಡೆಯಲಾಗಿದೆ. ಕೃಷಿ ಉತ್ಪನ್ನಗಳ ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ ರೈತರ ಆದಾಯ ದ್ವಿಗುಣವಾಗುತ್ತದೆ ಎಂಬ ಉದ್ದೇಶ ಈಡೇರಿಲ್ಲ, ಬದಲಿಗೆ ಸಮಸ್ಯೆಯೇ ಹೆಚ್ಚಾಗಿದೆ.
ಅಧಿಕಾರ ಕಳೆದುಕೊಂಡ ಮೇಲೂ ಬಿಜೆಪಿ ಅದೇ ಕಾಯ್ದೆಗೆ ಪಟ್ಟು ಹಿಡಿದಿದ್ದು, ಮೇಲ್ಮನೆಯಲ್ಲಿ ಜೆಡಿಎಸ್ ಕೂಡ ಕೈಜೋಡಿಸಿದ್ದೂ ನಿಗೂಢವಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಕೇಂದ್ರದ ಎಪಿಎಂಸಿ ಮಾದರಿ ಕಾಯ್ದೆ ಜಾರಿಗೆ ಮುಂದಾದಾಗ ವಿಧಾನಸಭೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಬಲವಾಗಿ ವಿರೋಧಿಸಿದ್ದರು. ಒಂದೂವರೆ ತಾಸು ಮಾತನಾಡಿರುವ ದಾಖಲೆಯೂ ಇದೆ. ಮಧ್ಯವರ್ತಿಗಳು ರೈತರಿಗೆ ಶೋಷಣೆ ಇಲ್ಲವೇ ವಂಚನೆ ಮಾಡಿರುವ ದೂರು ರುಜುವಾತಾದರೆ ಶಿಕ್ಷೆಯ ಪ್ರಮಾಣ ಆರು ತಿಂಗಳಿಂದ ಮೂರು ತಿಂಗಳಿಗೆ ಇಳಿಸಿದೆ. ಇದೊಂದು ಅಂಶ ತಿದ್ದುಪಡಿ ಕಾಯ್ದೆಯಲ್ಲಿದ್ದು, ಹೊಸದೇನಿಲ್ಲ ಎಂದರು. ಮಧ್ಯವರ್ತಿಗಳು ಕೂಡ ರೈತರ ಮಕ್ಕಳೇ ಆಗಿರುತ್ತಾರೆ. ಪರವಾನಗಿ ಪಡೆದು ವಹಿವಾಟು ನಡೆಸುತ್ತಾರೆ. ಕೆಲ ದಲ್ಲಾಳಿಗಳ ತಪು್ಪ ಮಾಡಿದ್ದಾರೆ ಎಂದು ದಲ್ಲಾಳಿಗಳ ಸಮೂಹ ದೋಷಿಯಾಗಲಾರದು ಎಂದು ಸಮಜಾಯಿಷಿ ನೀಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಾಗಿ ರೈತರು, ಹಮಾಲಿಗಳು ಮತ್ತು ಎಪಿಎಂಸಿಗಳು ಕೂಡ ದುಃಸ್ಥಿತಿಗೆ ತಳ್ಳಲ್ಪಟ್ಟವು. ಎಪಿಎಂಸಿ ವಹಿವಾಟು ಶುಲ್ಕ ಸಂಗ್ರಹವು 2018-19ರಲ್ಲಿ 680 ಕೋಟಿ ರೂ.ಗಳಿದ್ದದ್ದು ಕ್ರಮೇಣ 300 ಕೋಟಿ ರೂ., ನಂತರ 180 ಕೋಟಿ ರೂ.ಗಳಿಗೆ ಕುಸಿದಿದೆ. ಇವುಗಳನ್ನು ಸುಸ್ಥಿತಿ ಹಳಿಗೆ ತಂದು, ಅವಲಂಬಿತ ಎಲ್ಲರಿಗೂ ಅನುಕೂಲ ಮಾಡಿಕೊಡುವುದೇ ಸರ್ಕಾರದ ಗುರಿ. ಎಪಿಎಂಸಿ ತಿದ್ದುಪಡಿ ಮಸೂದೆಗೆ ಉಭಯ ಸದನಗಳು ಒಪ್ಪಿಗೆ ನೀಡಿದರೆ, ನಂತರ ಎಪಿಎಂಸಿಗಳಿಗೆ ಮೂಲ ಸವಲತ್ತು ಕಲ್ಪಿಸಿ, ಬಲವರ್ಧನೆ ಕ್ರಮವಹಿಸಲಾಗುವುದು. ಎಪಿಎಂಸಿ ವ್ಯವಸ್ಥೆಯಲ್ಲಿ ಇರುವ ಲೋಪ-ದೋಷ ಸರಿಪಡಿಸಲು ಸರ್ಕಾರ ಸಿದ್ಧವಾಗಿದೆ ಎಂದರು.