ಪಠ್ಯಕ್ರಮದಲ್ಲಿ ಬದಲಾವಣೆ ಅಗತ್ಯ

WORKSHOP
Published on

ಶಿವಮೊಗ್ಗ: ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅನಿವಾರ್ಯ. ಸಾಮಾಜಿಕ ಬದಲಾವಣೆಗಳಿಗೆ ಅನುಗುಣವಾಗಿ ಪಠ್ಯಕ್ರಮದಲ್ಲೂ ಕೆಲವೊಂದು ಮಾರ್ಪಾಡುಗಳು ಅವಶ್ಯಕ ಎಂದು ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎಂ.ಕಾಶೀನಾಥ್ ಹೇಳಿದರು.

ಕುವೆಂಪು ವಿವಿ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಬಿಇಡಿ ಕಾಲೇಜುಗಳ ಪ್ರಾಚಾರ್ಯರು ಹಾಗೂ ಹಾಗೂ ಪ್ರಶಿಕ್ಷಕರ ಸಂಘದಿಂದ ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಎರಡು ವರ್ಷಗಳ ಬಿಇಡಿ ಪಠ್ಯಕ್ರಮ ಮಾರ್ಪಾಡು ಕುರಿತ ರಾಜ್ಯ ಮಟ್ಟದ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.

ಪಠ್ಯಕ್ರಮದ ಮೂಲಕ ಸ್ಪರ್ಧಾತ್ಮಕ ಶಿಕ್ಷಕರನ್ನು ತಯಾರಿ ಮಾಡುವುದು, ಬಹು ಮಾಧ್ಯಮ ತಂತ್ರಜ್ಞಾನ ಆಧಾರಿತ ಶಿಕ್ಷಕರನ್ನು ರೂಪಿಸುವುದು, ನೈತಿಕ ಹಾಗೂ ಮೌಲ್ಯಧಾರಿತ ಶಿಕ್ಷಕರ ತರಬೇತಿ, ಪ್ರಶಿಕ್ಷಣಾರ್ಥಿಗಳಲ್ಲಿ ವೃತ್ತಿಪರತೆಯನ್ನು ಹೆಚ್ಚಿಸುವುದು, ಶಿಕ್ಷಕರ, ಪ್ರಶಿಕ್ಷಕರ ವೃತ್ತಿ ಬೆಳವಣಿಗೆ ಹಾಗೂ ಶಾಲಾ ಇಂಟರ್ನ್‌ಶಿಪ್‌ನಲ್ಲಿ ಗುಣಾತ್ಮಕ ಸುಧಾರಣೆಯನ್ನು ತರುವುದು ಸಾಧ್ಯವಿದೆ ಎಂದರು.

ಕುವೆಂಪು ವಿವಿ ಶಿಕ್ಷಣ ವಿಭಾಗದ ಅಧ್ಯಕ್ಷೆ ಪ್ರೊ.ಸಿ.ಗೀತಾ ಮಾತನಾಡಿ, ಕಾಲ ಬದಲಾದಂತೆ ಶಿಕ್ಷಣದಲ್ಲಿನ ಪಠ್ಯಕ್ರಮ, ಬೋಧನಾ ವಿಧಾನ, ಪರೀಕ್ಷಾ ಪದ್ಧತಿ ಸಹ ಬದಲಾಗುತ್ತಿದೆ. ಈ ಬದಲಾವಣೆಯ ಪ್ರಕ್ರಿಯೆ ಪ್ರಯೋಗಾತ್ಮಕವಾಗಷ್ಟೇ ಇರಬಾರದು. ಶಿಕ್ಷಣದಲ್ಲಿ ಸಾಂಪ್ರದಾಯಿಕ ಮತ್ತು ಹೊಸ ಅನ್ವೇಷಣೆಗಳ ಸಮನ್ವಯತೆಯೊಂದಿಗೆ ಕೌಶಲಪೂರ್ಣ ಕಲಿಕೆ ಅಗತ್ಯ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net