ಶಿವಮೊಗ್ಗದಲ್ಲಿ ಆತಂಕದ ವಾತಾವರಣ; ಕಾರಣ 3 ಪ್ರಕರಣ: ಹರ್ಷ ಸೋದರಿಗೆ ಬೆದರಿಕೆ ಜತೆಗೇ 1 ಹಲ್ಲೆ, ಇನ್ನೊಂದು ಕೊಲೆ

22 smg Harsha (1)(1)
Published on

ಶಿವಮೊಗ್ಗ: ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಇತ್ತೀಚೆಗೆ ಕೊಲೆಯಾಗಿದ್ದ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಬೆನ್ನಿಗೇ ಆತನ ಸಹೋದರಿಗೆ ಬೆದರಿಕೆ ಹಾಕಿದ ಪ್ರಕರಣ ನಡೆದಿದೆ. ಅದರ ಜತೆಗೆ ಇನ್ನೆರಡು ಪ್ರಕರಣಗಳೂ ನಡೆದಿರುವುದರಿಂದ ಶಿವಮೊಗ್ಗದಲ್ಲಿ ಒಂದು ರೀತಿಯಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಸೋಮವಾರ ತಡರಾತ್ರಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್‌ನಲ್ಲಿ ಕೂಗುತ್ತ ಓಡಾಡಿದ ಅನ್ಯಕೋಮಿನ ಯುವಕರ ಗುಂಪು ಹಿಂದೂ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಬೆದರಿಕೆ ಹಾಕಿದೆ. ಅಲ್ಲದೆ, ಓರ್ವ ಯುವಕನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಿದೆ. ಅಲ್ಲದೆ ಇನ್ನೊಂದು ಕೊಲೆ ಕೂಡ ನಡೆದಿದ್ದು, ಒಟ್ಟಿನಲ್ಲಿ ಶಿವಮೊಗ್ಗದಲ್ಲಿ ಪ್ರಕ್ಷ್ಯುಬ್ಧ ವಾತಾವರಣ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್ ಹೇಳಿಕೆ ನೀಡಿದ್ದು, ನಿನ್ನೆ ಒಟ್ಟಿಗೆ ಮೂರು ಪ್ರಕರಣಗಳು ನಡೆದಿವೆ ಎಂಬುದನ್ನು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಒಟ್ಟು ಮೂರು ಪ್ರಕರಣಗಳು ನಡೆದಿವೆ. ಶಿವಮೊಗ್ಗದ ಭರ್ಮಪ್ಪ ನಗರದಲ್ಲಿ ಪ್ರಕಾಶ್ ಎಂಬಾತನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಲಾಗಿದೆ. ಕೆಲಸ ಮುಗಿಸಿ ಮನೆಗೆ ತಿರುಳುತ್ತಿದ್ದ ಪ್ರಕಾಶ್ (25 )ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್​ಪಿ ತಿಳಿಸಿದ್ದಾರೆ.

ಇನ್ನೊಂದು ಪ್ರಕರಣ ಶಿವಮೊಗ್ಗದ ವೆಂಕಟೇಶ ನಗರದಲ್ಲಿ ನಡೆದಿದ್ದು, ವಿಜಯ್ ಎಂಬವರನ್ನು ಹತ್ಯೆ ಮಾಡಲಾಗಿದೆ. ರಾತ್ರಿ ಒಂದೂಕಾಲು ಗಂಟೆ ಸಮಯದಲ್ಲಿ ಕೆಲಸಕ್ಕೆಂದು ಮನೆಯಿಂದ ಹೊರಹೋಗಿದ್ದ ವಿಜಯ್ ಎಂಬಾತನ ಕೊಲೆ ಮಾಡಲಾಗಿದೆ. ಈ ಹತ್ಯೆಯ ಸಿಸಿಟಿವಿ ಕ್ಲಿಪ್ಪಿಂಗ್ ಸಿಕ್ಕಿದ್ದು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಮತ್ತೊಂದು ಘಟನೆಯಲ್ಲಿ ಶಿವಮೊಗ್ಗದ ಸಿಗೆಹಟ್ಟಿ ಭಾಗದಲ್ಲಿ ಮೂರು ಬೈಕುಗಳಲ್ಲಿ ಬಂದ 9 ದುಷ್ಕರ್ಮಿಗಳು ಜನರಿಗೆ ಬೆದರಿಕೆ ಹಾಕಿ ಭಯದ ವಾತಾವರಣ ಉಂಟಾಗಿಸಿದ್ದರು. ಫೆ.20ರಂದು ಹತ್ಯೆಯಾದ ಹಿಂದೂ ಕಾರ್ಯಕರ್ತ ಹರ್ಷನ ಸಹೋದರಿ ಅಶ್ವಿನಿ ಮೇಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಈ ಭಾಗದಲ್ಲಿ ಇರುವ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಈ ಮೂರು ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿದಂತೆ 3 ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಎಸ್​ಪಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net