

ಸಾಗರ: ಚಿತ್ತಾರ ಕಲೆ ಗ್ರಾಮೀಣ ಜಾನಪದದ ಸಾಕ್ಷಿಪ್ರಜ್ಞೆ. ಚಿತ್ತಾರ ಕಲೆ ಪರಿಸರದ ಜತೆ ನಿಕಟ ಸಂಬಂಧ ಹೊಂದಿದ್ದು, ಭೂಮಣ್ಣಿ ಬುಟ್ಟಿಯಲ್ಲಿ ನಾವು ಪ್ರಕೃತಿಯ ಅನೇಕ ಅಂಶಗಳನ್ನು ಗಮನಿಸಬಹುದು. ಈ ಕಲೆ ಶ್ರಮಜೀವಿಗಳ ಪ್ರತೀಕ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೆ ಚಿತ್ತಾರ ಕಲಾವಿದ ಸಿರಿವಂತೆ ಚಂದ್ರಶೇಖರ್ ಹೇಳಿದರು.
ನಗರದ ಗಾಂಧಿ ಮೈದಾನದಲ್ಲಿ ಸಹೃದಯ ಬಳಗ, ತಾಲೂಕು ಇತಿಹಾಸ ವೇದಿಕೆಯಿಂದ 24ನೇ ವರ್ಷದ ಸಾಗರೋತ್ಸವ ಅಂಗವಾಗಿ ಆಯೋಜಿಸಿದ್ದ ಭೂಮಣ್ಣಿ ಬುಟ್ಟಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಹಿರಿಯರು ಕಲೆಯನ್ನು ಭೂಮಣ್ಣಿ ಬುಟ್ಟಿ, ಹಸೆಗೋಡೆ, ಚಿತ್ತಾರ ಕಲೆ, ತೋರಣ ಸೇರಿ ವಿವಿಧ ಪ್ರಕಾರಗಳಲ್ಲಿ ಅಭಿವ್ಯಕ್ತಗೊಳಿಸುವ ಕೆಲಸ ಮಾಡಿದ್ದಾರೆ. ಹಿರಿಯರ ಕಲಾಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಕಿರಿಯರ ಕೆಲಸ. ಇಂತಹ ಸ್ಪರ್ಧಾ ಕಾರ್ಯಕ್ರಮಗಳು ಕಲೆ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತದೆ. ಹಸೆಚಿತ್ರ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಮಾಸೂರು ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್ ಮೆಳವರಿಗೆ ಮಾತನಾಡಿ, ಸ್ಪರ್ಧಾ ಕಾರ್ಯಕ್ರಮಗಳ ಮೂಲಕ ಕಲಾವಂತಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಸಾಧ್ಯವಿದೆ. ಹಸೆ ಚಿತ್ತಾರಕ್ಕೆ ತನ್ನದೇ ಆದ ಕಲಾವೈಶಿಷ್ಟೃವಿದೆ. ಅತ್ಯಂತ ಸೂಕ್ಷ್ಮ ಕುಸುರಿ ಕಲೆ ಮೂಲಕ ಅಭಿವ್ಯಕ್ತಗೊಳ್ಳುತ್ತದೆ. ಚಿತ್ತಾರದ ಒಂದೊಂದು ಎಳೆಯೂ ವಿಶೇಷತೆ ಹೊಂದಿರುತ್ತದೆ ಎಂದು ಹೇಳಿದರು.
ಎನ್.ಲಲಿತಮ್ಮ, ಬಳಗದ ಪ್ರಧಾನ ಕಾರ್ಯದರ್ಶಿ ಲೋಕೇಶಕುಮಾರ್, ಗಣಪತಿ ಮಂಡಗಳಲೆ, ಉಮೇಶ್ ಹಿರೇನೆಲ್ಲೂರು, ರಮೇಶ್ ಕೆಳದಿ, ಅಶೋಕ್ ಬೇಳೂರು, ದಿನೇಶ್ ಬರದವಳ್ಳಿ, ಎಲ್.ಚಂದ್ರಪ್ಪ, ಚೌಡಮ್ಮ ಬಸವರಾಜ್ ಇತರರಿದ್ದರು.