

ಆನಂದಪುರ: ಮೂಲಸೌಕರ್ಯ ಸೇರಿ ಅನೇಕ ಕೊರತೆ ನಡುವೆಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮೀಪದ ಸಿದ್ದೇಶ್ವರ ಕಾಲನಿಯಲ್ಲಿ ಏರ್ಪಡಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಕಷ್ಟದ ಪರಿಸ್ಥಿತಿಯಲ್ಲೂ ಶಿಕ್ಷಣ ಪಡೆದು ಉತ್ತಮ ಫಲಿತಾಂಶ ಪಡೆಯುವ ಜತೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಪಾಲಕರು ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳತ್ತ ಆಕರ್ಷಿತರಾಗಿ ಸರ್ಕಾರಿ ಶಾಲೆಯ ಅವನತಿಗೆ ಪರೋಕ್ಷ ಕಾರಣರಾಗುತ್ತಿದ್ದಾರೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಪ್ರಗತಿಗೆ ಹಲವು ಯೋಜನೆ ಜಾರಿಗೊಳಿಸಿದೆ. ನುರಿತ ಶಿಕ್ಷಕರ ಮಾರ್ಗದರ್ಶನ ದೊರೆಯುವ ಸರ್ಕಾರಿ ಶಾಲೆಗಳನ್ನು ಪಾಲಕರು ಉಳಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಮಕ್ಕಳಿಗೆ ಪಾಲಕರು ಉತ್ತಮ ಶಿಕ್ಷಣ ನೀಡಬೇಕು. ವಿದ್ಯಾವಂತ ಮಕ್ಕಳು ನಿಜವಾದ ಆಸ್ತಿ ಎಂಬ ಸತ್ಯ ಎಲ್ಲರೂ ಅರಿತುಕೊಳ್ಳಬೇಕು ಎಂದರು. ಶಾಲೆ ಮಂಜೂರಾತಿಗೆ ಕಾರಣರಾದ ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಮುರಳಿ, ಆನಂದಪುರ ಗ್ರಾಪಂ ಅಧ್ಯಕ್ಷ ಮೋಹನ್‌ಕುಮಾರ್, ಉಪಾಧ್ಯಕ್ಷೆ ರೂಪಾ, ಸದಸ್ಯರಾದ ಶಂಕರ, ಗಜೇಂದ್ರ, ನೇತ್ರಾವತಿ, ತ್ಯಾವರೆಹಳ್ಳಿ ಮೋಹನ್‌ಕುಮಾರ್, ಮುಖ್ಯಶಿಕ್ಷಕ ಕುಮಾರಸ್ವಾಮಿ, ತಾಪಂ ಮಾಜಿ ಸದಸ್ಯೆ ಜ್ಯೋತಿ ಕೊವಿ, ಸರಸ್ವತಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಸುಬ್ರಹ್ಮಣ್ಯ, ಎನ್.ಉಮೇಶ, ಅರುಣ, ಹೇಮರಾಜ್ ಇತರರಿದ್ದರು.