ದೇವಿ ಸ್ತುತಿಯಿಂದ ಸಿಗುವ ಪುಣ್ಯ ಅಪಾರ

22sgr6
ಸಾಗರದಲ್ಲಿ ಆರಂಭಗೊಂಡ ನವರಾತ್ರ ನಮಸ್ಯಾ ಕಾರ್ಯಕ್ರಮಕ್ಕೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಲಲಿತಾ ಮೂರ್ತಿಗೆ ಪುಷ್ಪನಮನ ಸಲ್ಲಿಸಿದರು.
Published on

ಸಾಗರ: ಪುಣ್ಯ ಕಾರ್ಯದಲ್ಲಿ ಮನಸ್ಸು ಉಳ್ಳವರಾಗಿ, ದುಖದಿಂದ ದೂರವಿರುವ ಕಾರ್ಯ ಮಾಡುವಂತಾಗಲು ಇರುವ ಏಕೈಕ ದಾರಿ ಜಗನ್ಮಾತೆ ಶ್ರೀ ರಾಜರಾಜೇಶ್ವರಿಯ ಧ್ಯಾನ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಸಾಗರದ ಅಗ್ರಹಾರದಲ್ಲಿರುವ ರಾಘವೇಶ್ವರ ಸಭಾಭವನದಲ್ಲಿ ಆರಂಭಗೊಂಡ ನವರಾತ್ರ ನಮಸ್ಯಾ ಕಾರ್ಯಕ್ರಮಕ್ಕೆ ಲಲಿತಾ ಮೂರ್ತಿಗೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದ ಅವರು, ಲಲಿತೋಪಾಖ್ಯಾನ ಪ್ರವಚನದಲ್ಲಿ ಮಾತನಾಡಿ, ದೇವಿ ಸ್ತುತಿಗೆ ಮುಂದಾಗಬೇಕು ಎಂದು ಮನಸ್ಸು ಮಾಡಿದಾಕ್ಷಣಕ್ಕೆ ನಾವು ಮಾಡಿದ ಪಾಪಗಳ ಪರಿಹಾರ ಸಾಧ್ಯ ಎನ್ನುವುದಾದರೆ ಇನ್ನೂ ನಿಜವಾಗಿ ಶ್ರದ್ಧಾಭಕ್ತಿಯಿಂದ ಆರಾಧನೆಯಲ್ಲಿ ತೊಡಗಿದಾಗ ಸಿಗಬಹುದಾದ ಪುಣವೆಷ್ಟು ಎಂಬ ಸಂಗತಿ ಊಹೆಗೂ ನಿಲುಕಲಾರದು ಎಂದು ತಿಳಿಸಿದರು.

ಪೂಜೆ ಮಹತ್ವ ಅರಿತು ಆರಾಧಿಸಬೇಕು. ಪೂಜೆಯಲ್ಲಿ ಬಳಸುವ ಮಂತ್ರದ ಮೂಲ ಅಂತಹ ಶಕ್ತಿ ಹೊಂದಿದೆ. ದೇವಿಯ ಆಚರಣೆ ಮತ್ತು ಆರಾಧನೆಯನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಬೇಕು. ಜಗತ್ತಿಗೆ ನೆಮ್ಮದಿ ನೀಡುವ ಉದ್ದೇಶದ ಕಾರ್ಯಗಳಿಗಾಗಿ ಹಿಂದೆ ಋಷಿ ಮುನಿಗಳು, ತಪಸ್ವಿಗಳು ಇಂಥ ಜ್ಞಾನ ಹುಡುಕಿದವರು. ಅದನ್ನು ಅರಿಯಬೇಕಾದರೆ ಗುರುವಿನ ಅರಿವಿರಬೇಕು ಎಂದರು.

ನವರಾತ್ರ ನಮಸ್ಯಾದ ಪುಣ್ಯಾಹವಾಚನ, ಮಹಾಸಂಕಲ್ಪ, ಯೋಗನಿದ್ರೆ ಉಪಾಸನೆ, ದುರ್ಗಾ ಹವನ, ಚಂಡಿಕಾ ಹವನ, ಲಲಿತಾ ಮೂರ್ತಿ ಪ್ರತಿಷ್ಠಾಪನೆ, ಮಾತೆಯರಿಂದ ಕುಂಕುಮಾರ್ಚನೆ, ಉಡಿ ಸಮರ್ಪಣೆ, ಸ್ತೋತ್ರ ಪಠಣ, ಭಜನೆ ನೆರವೇರಿತು.

ನವರಾತ್ರ ನಮಸ್ಯಾ ಅಂಗವಾಗಿ ಸಮಿತಿ ಆಯೋಜಿಸಿದ್ದ ಸಮಾಜ ಸಂಭ್ರಮದಲ್ಲಿ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಪ್ರಭು, ವೈಶ್ಯವಾಣಿ ಸಮಾಜದ ಅಧ್ಯಕ್ಷ ಸತ್ಯನಾರಾಯಣ ಅವರನ್ನು ಸಮಾಜದ ಪರವಾಗಿ ಗೌರವಿಸಲಾಯಿತು. ಸಂಜೆ ದುರ್ಗಾದೀಪ ನಮಸ್ಕಾರ, ಶ್ರೀ ರಾಜರಾಜೇಶ್ವರಿ ಪೂಜೆ ನೆರವೇರಿತು.

ಸಮಿತಿ ಅಧ್ಯಕ್ಷ ಗುರುಮೂರ್ತಿ ಹೆಗಡೆ, ಕಾರ್ಯದರ್ಶಿ ಪ್ರಸನ್ನ ಹೆಗಡೆ ಕೆರೆಕೈ, ಸಂಚಾಲಕರಾದ ಮುರಳಿ, ಮಹಾ ಮಂಡಲದ ಕಾರ್ಯದರ್ಶಿ ಮಹೇಶ ಚಟ್ನಳ್ಳಿ, ಉಪಾಧ್ಯಕ್ಷ ಶಾಂತಾರಾಮ, ರಮೇಶ ಹೆಗಡೆ ಗುಂಡೂಮನೆ, ಶ್ರೀನಾಥ ಸಾರಂಗ, ರಾಮಚಂದ್ರ, ಶಿವರಾಮಯ್ಯ, ಗೌತಮ, ರವಿ ಕೈತೋಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net