

ತೀರ್ಥಹಳ್ಳಿ: ಸನಾತನ ಧರ್ಮದ ಮೌಲ್ಯವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಲೆ ಯಕ್ಷಗಾನ. ಈ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯೂ ಗಮನಾರ್ಹ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶ್ರೀ ಗುತ್ಯಮ್ಮ ಯಕ್ಷಗಾನ ಮತ್ತು ಜಾನಪದ ಕಲಾಕೇಂದ್ರದಿಂದ ಹೆರಂಜಾಲು ಯಕ್ಷ ಬಳಗದ ಸಹಯೋಗದೊಂದಿಗೆ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ಯಕ್ಷಗಾನ ಪ್ರದರ್ಶನದಲ್ಲಿ ಬಡಗುತಿಟ್ಟಿನ ಉದಯಯೋನ್ಮುಖ ಮಹಿಳಾ ಭಾಗವತರಾದ ಚಿಂತನಾ ಹೆಗ್ಡೆ ಅವರಿಗೆ ಸಹ್ಯಾದ್ರಿ ಸಿರಿ ಬಿರುದು ನೀಡಿ ಮಾತನಾಡಿದರು.
ಗಂಡು ಕಲೆ ಎಂದೇ ಪ್ರಸಿದ್ಧಿ ಇರುವ ಯಕ್ಷಗಾನ ಕ್ಷೇತ್ರದಲ್ಲಿ ಮಹಿಳಾ ಕಲಾವಿದರೂ ಛಾಪು ಮೂಡಿಸಿದ್ದಾರೆ. ಭಾಗವತಿಕೆಯಲ್ಲಿ ಮಿಂಚುತ್ತಿರುವ ಚಿಂತನಾ ಹೆಗ್ಡೆ ಅತ್ಯಂತ ಪ್ರತಿಭಾವಂತೆಯಾಗಿದ್ದು ಹಾಡುಗಾರಿಕೆಯಲ್ಲಿ ವಿಶೇಷ ಭರವಸೆ ಮೂಡಿಸಿದ್ದಾರೆ. ಕರಾವಳಿ ಮೂಲದ ಯಕ್ಷಗಾನ ಪರಂಪರೆ ಮಲೆನಾಡಿನಲ್ಲೂ ಮುಂದುವರಿದಿರುವುದು ಗಮನಾರ್ಹ ಸಂಗತಿ ಎಂದು ತಿಳಿಸಿದರು.
ಹೆರಂಜಾಲು ಯಕ್ಷ ಬಳಗದಿಂದ ತೆಂಕು ಬಡಗುತಿಟ್ಟಿನ ಸ್ತ್ರೀಪಾತಧಾರಿ ಮಂಗಳಗಾರು ರಮೇಶ ಆಚಾರ್ಯ ಅವರಿಗೆ ಭಾಗವತ ಹೆರಂಜಾಲು ಗೋಪಾಲ ಗಾಣಿಗ ಹೆರಂಜಾಲು ಯಕ್ಷ ಪ್ರಶಸ್ತಿ ನೀಡಿ ಗೌರವಿಸಿದರು.
ಗುತ್ಯಮ್ಮ ಯಕ್ಷಗಾನ ಮತ್ತು ಜಾನಪದ ಕಲಾಕೇಂದ್ರದ ಅಧ್ಯಕ್ಷ ಬಿ.ಗಣಪತಿ, ಕರ್ನಾಟಕ ಸೌಹಾರ್ದ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಪ್ರಸನ್ನಕುಮಾರ್, ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯ ರತ್ನಾಕರ ಶೆಟ್ಟಿ, ಗುತ್ಯಮ್ಮ ದೇವಸ್ಥಾನದ ಅಧ್ಯಕ್ಷ ಬಿ.ವಿ.ನಾಗರಾಜ್, ಮರಡಿ ರಮಾನಂದ, ಮಂಜುನಾಥ್ ಇದ್ದರು. ಪಾಂಚಜನ್ಯ ಯಕ್ಷಗಾನ ಪ್ರದರ್ಶನ ನಡೆಯಿತು.