

ತ್ಯಾಗರ್ತಿ: ಕೇಂದ್ರ ಸರ್ಕಾರ ಅಡಕೆ ಬಗ್ಗೆ ಸಂಶೋಧನೆ ನಡೆಸಿ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಬೇಕು ಎಂದು ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ಹೇಳಿದರು.
ಸಮೀಪದ ಬೆಳಂದೂರು ಗ್ರಾಮದಲ್ಲಿ ಅಡಕೆ ಬೆಳೆಗಾರರ ಸಂಘದ ಸದಸ್ಯರಿಗೆ ಷೇರು ಸರ್ಟಿಫಿಕೇಟ್ ವಿತರಿಸಿ ಮಾತನಾಡಿ, ಮಲೆನಾಡಿನ ಶೇ.80ರಷ್ಟು ಕೃಷಿಕರು ಅಡಕೆ ಉತ್ಪನ್ನಗಳ ವ್ಯವಹಾರದ ಮೇಲೆ ಅವಲಂಬಿತರಾಗಿದ್ದಾರೆ. ಅವರ ಭವಿಷ್ಯದ ದೃಷ್ಟಿಯಿಂದ ಬೆಳೆಗಾರರ ಹಿತರಕ್ಷಣೆಗೆ ಪಕ್ಷಾತೀತವಾಗಿ ಒಗ್ಗಟ್ಟಾಗಿ ಇರಬೇಕು ಎಂದು ತಿಳಿಸಿದರು.
ಕೃಷಿಕ ಬೆಳಂದೂರು ನಿಂಗಪ್ಪ, ಸಂಘದ ಕಾರ್ಯದರ್ಶಿ ರಾಜೇಂದ್ರ ಖಂಡಿಕ, ನಿರ್ದೇಶಕ ನಾಗಾನಂದ, ಗ್ರಾಪಂ ಸದಸ್ಯ ಸುಭಾಶ್ಚಂದ್ರ, ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಜೇಕಬ್, ಪ್ರಮುಖರಾದ ಎಂ.ಎಲ್.ಗಣಪತಿ , ನಾಗರಾಜ ನಾಡವಳ್ಳಿ, ಜಗದೀಶ್ ಬೆಳಂದೂರು ಇತರರಿದ್ದರು.