ದೇವಾಲಯಗಳು ಸನಾತನ ಸಂಸ್ಕೃತಿಯ ಪ್ರತೀಕ

27 SGR 03
ಶ್ರೀ ಉಮಾಮಹೇಶ್ವರ
Published on

ಸಾಗರ: ಸನಾತನ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಇದರಲ್ಲಿ ದೇವಾಲಯಗಳು ಶ್ರದ್ಧಾಭಕ್ತಿ ಕೇಂದ್ರಗಳಾಗಿ ಮಹತ್ತರ ಪಾತ್ರ ವಹಿಸಿವೆ ಎಂದು ಶ್ರೀ ಉಮಾಮೇಶ್ವರ ಸೇವಾ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಸಿಎಂಎನ್ ಶಾಸ್ತ್ರಿ ಹೇಳಿದರು.

ಹೊಸಗುಂದದ ಶ್ರೀ ಉಮಾಮಹೇಶ್ವರ ದೇವಾಲಯ ನಗರಿಯಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ದೇವಾಲಯಗಳ 24ನೇ ವಾರ್ಷಿಕೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಶೃಂಗೇರಿ ಶಾರದಾ ಪೀಠದ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಮುನ್ನಡೆದಿವೆ ಎಂದು ತಿಳಿಸಿದರು.

ಪುರಾತನ ದೇವಾಲಯಗಳು ಧಾರ್ಮಿಕ ಆಚರಣೆ ಮಹತ್ವ ಮತ್ತು ವಾಸ್ತುಶಿಲ್ಪದ ವಿಶೇಷತೆ ಸಾರಿವೆ. ನೂರಾರು ವರ್ಷಗಳ ಕಾಲ ಪೂಜೆ ಪುನಸ್ಕಾರಗಳಿಲ್ಲದೆ ಕಮರಿಹೋಗಿದ್ದ ದೇವಾಲಯಗಳಿಗೆ ಶೃಂಗೇರಿ ಶ್ರೀಗಳ ಮಾರ್ಗದರ್ಶನದಲ್ಲಿ ಪ್ರತಿಷ್ಠಾಪನೆ ಹೊಂದಿ ನಿರಂತರ ಪೂಜೆ ನಡೆಯುತ್ತಿದೆ ಎಂದರು.

ಪ್ರತಿಷ್ಠಾಪನೆಗೊಂಡು 24ನೇ ವಾರ್ಷಿಕೋತ್ಸವ ಅಂಗವಾಗಿ ರುದ್ರ ಹವನ, ಲಕ್ಷ್ಮೀ ಗಣಪತಿ ಹೋಮ, ವಿವಿಧ ಧಾರ್ಮಿಕ ಆಚರಣೆಗಳು ನಡೆಸಲಾಯಿತು. ಲೋಕಕಲ್ಯಾಣಾರ್ಥ ಪ್ರತಿ ವರ್ಷದಂತೆ ಉಮಾಮಹೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಧಾರ್ಮಿಕ ವಿಧಿವಿಧಾನಗಳನ್ನು ದೇವಾಲಯದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಭಟ್ ನೆರವೇರಿಸಿದರು. ಶಂಭು ಭಟ್, ಅನಂತ್ ಇಟಿಗಿ, ಮಂಜುನಾಥ್, ಉಮಾಮಹೇಶ್ವರ ಸೇವಾ ಟ್ರಸ್ಟಿನ ಶೋಭಾ ಶಾಸ್ತ್ರಿ, ಲತಾ, ವಿನಾಯಕ ಭಟ್, ಗಣಪತಿ ಶೆಟ್ಟಿ, ಕೆ.ಟಿ.ರಮೇಶ್, ಅನಂತ ಕಲ್ಲಾಪುರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net