

ಶಿರಾಳಕೊಪ್ಪ: ವಿದ್ಯಾರ್ಥಿಗಳು ಮೌಲ್ಯ ಶಿಕ್ಷಣ ಪಡೆಯುವುದು ಅವಶ್ಯಕ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಡಿ ಅಶೋಕ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯಿಂದ ಡಿಜಿಟಲ್ ಸಾಕ್ಷರತೆಗಾಗಿ ಯುವಕರು ಎಂಬ ಧ್ಯೇಯವಾಕ್ಯದಡಿ ಶಿಕಾರಿಪುರ ತಾಲೂಕು ಕುಸ್ಕೂರು ಗ್ರಾಮದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶ್ರದ್ಧೆಯಿಂದ ಮಾಡುವ ಕೆಲಸ ಸಾರ್ಥಕತೆ ಪಡೆದುಕೊಳ್ಳುವುದು. ಸಾಮಾನ್ಯ ಪ್ರಜೆಯೊಬ್ಬ ದೇಶಕ್ಕಾಗಿ ಕೊಡುಗೆ ನೀಡಬಹುದು. ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಪ್ರತಿಯೊಬ್ಬರು ಶಿಸ್ತುಬದ್ಧ ಜೀವನ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಪ್ರೊ. ಪ್ರಭಾಕರ್ ಎಸ್.ಮಂಟೂರೆ ಮಾತನಾಡಿ, ಎನ್‌ಎಸ್‌ಎಸ್ ಶಿಬಿರಾರ್ಥಿಗಳು ದೇಶ ಕಟ್ಟುವ ಕೆಲಸವನ್ನು ಮಾಡಬೇಕು. ಶಿಸ್ತು, ಸಮಯ, ಆರೋಗ್ಯ, ಶ್ರಮದ ಮಹತ್ವ ತಿಳಿಸಿ ಪ್ರತಿಯೊಬ್ಬರೂ ಸಮಾಜಮುಖಿಯಾಗಿ ಕೆಲಸಗಳನ್ನು ನಿರ್ವಹಿಸಬೇಕು. ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಸರ್ವಾಂಗೀಣ ವಿಕಾಸಕ್ಕೆ ಎನ್‌ಎಸ್‌ಎಸ್ ಸಹಕಾರಿ ಎಂದರು.
ಎನ್‌ಎಸ್‌ಎಸ್ ಧ್ಯೇಯೋದ್ದೇಶಗಳ ಬಗ್ಗೆ ಮುಖ್ಯಶಿಕ್ಷಕ ಬಿ.ಚನ್ನೇಶ್ ವಿವರಿಸಿದರು. ವಾರ್ಷಿಕ ಶಿಬಿರದ ಕುರಿತು ಎನ್.ಆರ್.ರಾಘವೇಂದ್ರ ಮಾಹಿತಿ ನೀಡಿದರು. ಪ್ರಾಧ್ಯಾಪಕರಾದ ಡಾ. ಕೆ.ಪಿ.ಮಂಜುಳಾ, ಎಸ್.ಹೇಮಾ ಪಂಡಿತ್, ವಿ.ತನುರಜಾ, ಜಿ.ನಾಗಲಕ್ಷ್ಮೀ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳು ಉಪಸ್ಥಿತರಿದ್ದರು.