ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕ್ರಮ

28sor1
ಸೊರಬದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ನೂತನ ಶಾಲಾ ಸುಧಾರಣಾ ಸಮಿತಿಯನ್ನು ಬಿಇಒ ಪುಷ್ಪಾ ಉದ್ಘಾಟಿಸಿದರು. ರುದ್ರಪ್ಪ ಕಡ್ಲೇರ್, ಶಶಿಧರ್, ಶ್ರೀಕಾಂತ್, ದಯಾನಂದ ಕಲ್ಲೇರ್ ಇತರರಿದ್ದರು.
Published on

ಸೊರಬ: ಸರ್ಕಾರಿ ಶಾಲೆಗಳಲ್ಲಿ ಭೌತಿಕ ಹಾಗೂ ಶೈಕ್ಷಣಿಕ ನ್ಯೂನತೆಗಳನ್ನು ಸರಿಪಡಿಸಿ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಲು ನೂತನ ಶಾಲಾ ಸುಧಾರಣಾ ಸಮಿತಿ ಕೆಲಸ ಮಾಡಲಿದೆ ಎಂದು ತಾಲೂಕು ಸಮಿತಿ ಅಧ್ಯಕ್ಷ ರುದ್ರಪ್ಪ ಕಡ್ಲೇರ್ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ನೂತನ ಶಾಲಾ ಸುಧಾರಣಾ ಸಮಿತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶೈಕ್ಷಣಿಕ ಪ್ರಗತಿಗೆ ಸಮಿತಿ ಕೆಲಸ ಮಾಡಲಿದೆ. ಸಮಸ್ಯೆಗಳಿದ್ದಲ್ಲಿ ಸಚಿವರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವುದು ಸಮಿತಿ ಉದ್ದೇಶ ಎಂದು ತಿಳಿಸಿದರು.

ಬಿಇಒ ಪುಷ್ಪಾ ಮಾತನಾಡಿ, ಶಿಕ್ಷಣ ಸಚಿವರ ಸಲಹೆ ಮೇರೆಗೆ ರಾಜ್ಯಾದ್ಯಂತ ಶಾಲಾ ಸುಧಾರಣಾ ಸಮಿತಿ ಜಾರಿಗೆ ಬಂದಿದ್ದು, ಸರ್ಕಾರದ ಆದೇಶದಂತೆ ತಾಲೂಕು ಸಮಿತಿ ರಚನೆಯಾಗಿದೆ. ವಿಧಾನಸಭಾ ಕ್ಷೇತ್ರದ ಶಾಸಕ, ಆಯಾ ಜಿಲ್ಲಾ ಉಸ್ತುವಾರಿ ಸಚಿವರನ್ನು ಒಳಗೊಂಡ ಸಮಿತಿ ಇದಾಗಿದ್ದು, ಶಾಸಕರು ಸಮಿತಿ ಅಧ್ಯಕ್ಷರಾಗಿರುತ್ತಾರೆ. ಸಚಿವ ಮಧು ಬಂಗಾರಪ್ಪ ಅವರಿಗೆ ಕೆಲಸದ ಒತ್ತಡ ಹೆಚ್ಚಿರುವುದರಿಂದ ನಾಮಿನಿ ಸದಸ್ಯ ರುದ್ರಪ್ಪ ಕಡ್ಲೇರ್ ಅವರನ್ನು ಅಧ್ಯಕ್ಷರನ್ನಾಗಿ ಸೂಚಿಸಿದ್ದಾರೆ ಎಂದರು.

ಮಕ್ಕಳ ಹಾಜರಾತಿ, ಗುಣಮಟ್ಟದ ಮಾನವ ಸಂಪನ್ಮೂಲ ಒದಗಿಸುವುದು, ಶಾಲೆಗಳಿಗೆ ಮಕ್ಕಳ ದಾಖಲಾತಿ, ಶಾಲೆ ದುರಸ್ತಿ, ಮೂಲ ಸೌಕರ್ಯ ಒದಗಿಸಲು ಸರ್ಕಾರದ ಜತೆಗೂಡಿ ಕೆಲಸ ಸೇರಿ ವಿವಿಧ ಸಂಗತಿಗಳ ಬಗ್ಗೆ ಸಮಿತಿ ಗಮನ ನೀಡಲಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಯಲ್ಲಿ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ವಿತರಿಸಲಾಯಿತು. ತಾಪಂ ಇಒ ಶಶಿಧರ್, ಅಕ್ಷರ ದಾಸೋಹ ನಿರ್ದೇಶಕ ಶ್ರೀಕಾಂತ್, ಸಂಪನ್ಮೂಲ ಅಧಿಕಾರಿ ದಯಾನಂದ ಕಲ್ಲೆರ್, ಮುರುಗೇಶ್, ಜಗದೀಶ್, ಗಿರಿಧರ್, ಗಣಪತಿ, ತಾರಾ ಶಿವಾನಂದ, ಶಿವಮೂರ್ತಿ, ರಾಮಪ್ಪ ಕಾನ್ಲೆ, ಕರಿಬಸಪ್ಪ, ಬಸವರಾಜ್ ಬಂದಿಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net