ಶಿಥಿಲಾವಸ್ಥೆಯ ಮನೆಗಳಲ್ಲಿ ವಾಸಿಸಬೇಡಿ

28SGR3
ಮಳೆಯಿಂದ ಮನೆ ಹಾನಿಗೊಳಗಾದ ಕುಟುಂಬಗಳಿಗೆ ನಗರಸಭೆಯಿಂದ ಪರಿಹಾರದ ಚೆಕ್ ಅನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವಿತರಿಸಿದರು. ಮೈತ್ರಿ ಪಾಟೀಲ್, ಸವಿತಾ ವಾಸು, ಗಣಪತಿ ಮಂಡಗಳಲೆ ಇತರರಿದ್ದರು.
Published on

ಸಾಗರ: ಹಳೇ ಮನೆ ಎನ್ನುವ ವ್ಯಾಮೋಹದಿಂದ ಶಿಥಿಲವಾದ ಮನೆಗಳಲ್ಲಿ ವಾಸ ಮಾಡಬೇಡಿ. ಸ್ವಲ್ಪ ಆರ್ಥಿಕವಾಗಿ ಕಷ್ಟ ಎನಿಸಿದರೂ ಮಳೆಗಾಲದಲ್ಲಿ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ವಾಸ ಮಾಡದೆ ಬಾಡಿಗೆ ಮನೆಯಲ್ಲಿ ವಾಸ ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರಸಭೆ ರಂಗಮಂದಿರದಲ್ಲಿ ಮಳೆಯಿಂದ ಮನೆ ಹಾನಿಗೊಳಗಾದ ಕುಟುಂಬಗಳಿಗೆ ನಗರಸಭೆಯಿಂದ ಪರಿಹಾರ ಚೆಕ್ ವಿತರಿಸಿ ಮಾತನಾಡಿ, ಮೇ ತಿಂಗಳಿಂದಲೇ ಮಳೆ ಬಂದಿದ್ದರಿಂದ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ನಗರಸಭೆ ಅಧ್ಯಕ್ಷರು, ಸದಸ್ಯರ ಜತೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ತಾತ್ಕಾಲಿಕ ಪರಿಹಾರ ನೀಡಲಾಗಿತ್ತು ಎಂದರು.

ಇದೀಗ ನಗರಸಭೆಯಿಂದ ಹೆಚ್ಚಿನ ನೆರವು ನೀಡಿದ್ದು, ಸರ್ಕಾರದಿಂದ ಸಹ ನೆರವು ಕಲ್ಪಿಸಲಾಗುತ್ತದೆ. ಮನೆ ಬಿದ್ದಿದ್ದಕ್ಕೆ, ಕಾಂಪೌಂಡ್ ಕುಸಿತಕ್ಕೆ ಪರಿಹಾರ ನೀಡಲು ಸರ್ಕಾರದಿಂದ ಹೊಸ ಮಾರ್ಗಸೂಚಿ ಬಂದಿದೆ. ಅಧಿಕಾರಿಗಳು ಬಡವರಿಗೆ ನೆರವಾಗುವ ರೀತಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, 27 ಮನೆಗಳಿಗೆ ನಗರಸಭೆಯಿಂದ ಪರಿಹಾರದ ಚೆಕ್ ನೀಡಲಾಗಿದೆ. ವಿಪರೀತ ಮಳೆಯಿಂದ ನಗರವ್ಯಾಪ್ತಿಯಲ್ಲಿ ದೊಡ್ಡಮಟ್ಟದ ಅನಾಹುತ ಸಂಭವಿಸಿದೆ ಎಂದರು.

ಉಪಾಧ್ಯಕ್ಷೆ ಸವಿತಾ ವಾಸು ಮಾತನಾಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರದ ಯೋಜನೆಯಲ್ಲಿ ಅವಕಾಶವಿದೆ. ಸೂರು ಇಲ್ಲದವರು ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಸದಸ್ಯ ವಿ.ಮಹೇಶ್, ಮಧುಮಾಲತಿ, ಸೈಯದ್ ಜಾಕೀರ್, ಎಲ್.ಚಂದ್ರಪ್ಪ, ರವಿಕುಮಾರ್, ಸಬೀನಾ ತನ್ವೀರ್, ಸಬಾನಾ, ಕುಸುಮಾ ಸುಬ್ಬಣ್ಣ, ಅರವಿಂದ ರಾಯ್ಕರ್, ಬಾಲಚಂದ್ರ, ಮದನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net