12ರಂದು ಶಿವಶರಣ ನುಲಿಯ ಚಂದಯ್ಯ ಜಯಂತ್ಯುತ್ಸವ

IMG_1061
Published on

ಶಿವಮೊಗ್ಗ: ಜಿಲ್ಲಾಡಳಿತ ಸಹಯೋಗದಿಂದ ಶಿವಶರಣ ನುಲಿಯ ಚಂದಯ್ಯ ಜಯಂತಿಯನ್ನು ಆ.12ರಂದು ಬೆಳಗ್ಗೆ 10ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಪಿ.ಕೃಷ್ಣಮೂರ್ತಿ ತಿಳಿಸಿದರು.

ಕೊರಮ ಸಮುದಾಯಕ್ಕೆ ಸೇರಿದ 12ನೇ ಶತಮಾನದ ವಚನಕಾರ ಶಿವಶರಣ ನುಲಿಯ ಚಂದಯ್ಯ ಜಯಂತಿಯನ್ನು ಪ್ರತಿ ವರ್ಷ ನೂಲು ಹುಣ್ಣಿಮೆಯಂದು ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ಜಯಂತಿಯನ್ನು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಆಚರಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯಲ್ಲಿ 30 ಸಾವಿರಕ್ಕೂ ಅಧಿಕ ಸಮಾಜದ ಜನರಿದ್ದಾರೆ. ಸರ್ಕಾರದ ಆದೇಶದ ಮೂಲಕ ನಮ್ಮ ಜನಾಂಗದ ವಚನಕಾರ, ಶಿವಶರಣ ಮತ್ತು ದಾರ್ಶನಿಕರಿಗೆ ಗೌರವ ಸಿಕ್ಕಿದೆ. ಪರಿಶಿಷ್ಟ ಜಾತಿಯಲ್ಲಿ ಅತಿ ಹಿಂದುಳಿದ ಜನಾಂಗವಾಗಿರುವ ಕೊರಮ ಜನಾಂಗವನ್ನು ಸರ್ಕಾರ ಗುರುತಿಸಿದ್ದು, ಜನಾಂಗದ ಕುಲಗುರು ನುಲಿಯ ಚಂದಯ್ಯನನ್ನು ಸ್ಮರಿಸುವಂತಾಗಿದೆ ಎಂದರು.

ಸಂಘದ ಕಾರ್ಯದರ್ಶಿ ಕೆ.ಕೆ.ದಿವಾಕರ್ ಮಾತನಾಡಿ, ಚಂದಯ್ಯನವರ ಆಶಯದಂತೆ ಪ್ರತಿಯೊಬ್ಬರ ಮನದಲ್ಲೂ ಭಕ್ತಿ ಮೂಡುವಂತೆ ಮಾಡುವುದು. ಕಾಯಕವನ್ನೇ ಬದುಕಾಗಿಸುವುದು ಮತ್ತು ಕಾಯಕಕ್ಕೆ ಬೆಲೆ ಕೊಡುವುದು ಹಾಗೂ ಅತಿಯಾಸೆಯಿಂದ ದೂರ ಇರುವುದೇ ಜಯಂತಿ ಆಚರಣೆಯ ಉದ್ದೇಶವಾಗಿದೆ ಎಂದರು.

ಸಂಘಟನಾ ಕಾರ್ಯದರ್ಶಿ ಕೆ.ಆರ್.ರವೀಂದ್ರಕುಮಾರ್ ಮಾತನಾಡಿದರು. ಉಪಾಧ್ಯಕ್ಷ ಫಕೀರಪ್ಪ ಭಜಂತ್ರಿ, ನಿರ್ದೇಶಕ ಕೆ. ರಾಮಚಂದ್ರ, ಸಿದ್ದಪ್ಪ, ರಾಮಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net