

ಶಿವಮೊಗ್ಗ: ಸಾಗರದಲ್ಲಿ ಭಜರಂಗದಳದ ಸುನೀಲ್ ಎಂಬಾತನ ಹಲ್ಲೆ ಯತ್ನಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಮೀರ್ ಸಹೋದರಿಯನ್ನು ಸುನೀಲ್ ಚುಡಾಯಿಸುತ್ತಿದ್ದ. ಇದರಿಂದ ಕೋಪಗೊಂಡ ಸಮೀರ್ ಮಚ್ಚಿನಿಂದ ಹಲ್ಲೆ ನಡೆಸಲು ಮುಂದಾಗಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀರ್ ತಂಗಿಯನ್ನು ನಾಲ್ಕು ತಿಂಗಳ ಹಿಂದಿನಿಂದಲೂ ಸುನೀಲ್ ಚುಡಾಯಿಸುತ್ತಿದ್ದ. ಸಮೀರ್‌ಗೆ ಕರೆ ಮಾಡಿ ನಿನ್ನ ತಂಗಿಯ ಮೊಬೈಲ್ ನಂಬರ್ ಕೊಡು ಎಂದು ಸುನೀಲ್ ಕೇಳಿದ್ದ. ಸಮೀರ್ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸುನೀಲ್ ತನ್ನ ನಡವಳಿಕೆ ಬದಲಿಸಿಕೊಂಡಿರಲಿಲ್ಲ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದರು.
ಸೋಮವಾರ ಸಮೀರ್ ಹಲ್ಲೆ ನಡೆಸುವ ಸ್ವಲ್ಪ ಸಮಯದ ಮುನ್ನ ಸುನೀಲ್ ಹಾಗೂ ಸಮೀರ್ ನಡುವೆ ಮಾತಿನ ಚಕಮಕಿ ನಡೆದಿದೆ. ಕುರಿಗಳನ್ನು ಸಾಕುತ್ತಿರುವ ಸಮೀರ್ ಅವುಗಳಿಗೆ ಹುಲ್ಲು, ಸೊಪ್ಪು ಕತ್ತರಿಸಲೆಂದು ಇರಿಸಿಕೊಂಡಿದ್ದ ಮಚ್ಚಿನಿಂದಲೇ ಸುನೀಲ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಹೇಳಿದರು.
ಲಾಡ್ಜ್‌ನಲ್ಲಿ ವಾಸ!
ಸಮೀರ್ ಹಾಗೂ ಸುನೀಲ್ ನಡುವೆ ಹಲವು ಬಾರಿ ಫೋನ್‌ನಲ್ಲಿ ಸಂಭಾಷಣೆ ನಡೆದಿರುವುದಕ್ಕೆ ಪೊಲೀಸರಿಗೆ ದಾಖಲೆಗಳು ಲಭ್ಯವಾಗಿವೆ. ಸಮೀರ್‌ನ ಗೆಳೆಯರಾದ ಇಮಿಯಾನ್ ಹಾಗೂ ಮನ್ಸೂರ್ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಬ್ಬರೂ ಸಾಗರದವರೇ ಆಗಿದ್ದರೂ ಲಾಡ್ಜ್‌ವೊಂದರಲ್ಲಿ ಉಳಿದುಕೊಂಡಿರುವುದು ಬೆಳಕಿಗೆ ಬಂದಿದೆ. ಇದು ಸಾಕಷ್ಟು ಕುತೂಹಲಕ್ಕೂ ಕಾರಣವಾಗಿದೆ.
ಪೊಲೀಸರು ಹೇಳುವ ಪ್ರಕಾರ ಸಮೀರ್, ಇಮಿಯಾನ್ ಹಾಗೂ ಮನ್ಸೂರ್ ಒಟ್ಟಿಗೇ ಕ್ರಿಕೆಟ್ ಆಡುತ್ತಿದ್ದವರು. ಪಂದ್ಯವೊಂದರಲ್ಲಿ ಸೋತ ಬಳಿಕ ಇಮಿಯಾನ್ ಹಾಗೂ ಮನ್ಸೂರ್ ಲಾಡ್ಜ್‌ನಲ್ಲೇ ಉಳಿದುಕೊಂಡಿದ್ದರು. ಈ ಮೂವರು ಲಾಡ್ಜ್ ಮಾಲೀಕನ ಜತೆ ಫೋನ್‌ನಲ್ಲಿ ಸಂಭಾಷಣೆ ನಡೆಸಿರುವುದಕ್ಕೂ ದಾಖಲೆಗಳು ಸಿಕ್ಕಿವೆ.