ಗ್ರಾಮಾಭಿವೃದ್ಧಿ ಯೋಜನೆಯಿಂದ ಸೇವಾಕಾರ್ಯ

13 HHR 06
Published on

ಹೊಳೆಹೊನ್ನೂರು: ಮಹಿಳೆಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದು ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಮಾಡಲಾಗದ ಅನೇಕ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದ ಹಿಂದುಳಿದ ಕುಟುಂಬದ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಾಲ ಸೌಲಭ್ಯ, ಆರೋಗ್ಯ ಸೇವೆ, ತರಬೇತಿ ಸೇರಿದಂತೆ ಅನೇಕ ಮಾಹಿತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರಾಮಾಣಿಕ ಸದಸ್ಯರಿಂದ ಸಂಸ್ಥೆ ಮುಂದುವರಿಯಲು ಸಹಕಾರಿ ಎಂದರು.

ಪಟ್ಟಣದ ಶ್ರೀ ಸತ್ಯಧರ್ಮ ತೀರ್ಥರ ಉತ್ತರಾಧಿಮಠದ ಪಂಡಿತ್ ಶ್ರೀನಿವಾಸಾಚಾರ್ಯ ನವರತ್ನ ಮಾತನಾಡಿ, ಧರ್ಮದ ರಕ್ಷಣೆ ಮಾಡುವವರನ್ನು ಧರ್ಮ ರಕ್ಷಿಸುತ್ತದೆ. ಅದೇ ರೀತಿ ಪರಿಸರವನ್ನು ಕೂಡ ರಕ್ಷಿಸಬೇಕು. ಶ್ರೇಷ್ಠ ಕಾರ್ಯದಲ್ಲಿ ತೊಡಗುವುದು ಕೂಡ ಧರ್ಮ ಕಾರ್ಯ. ಮನಸ್ಸಿನಲ್ಲಿ ಶಾಂತಿ ಕಂಡುಕೊಳ್ಳಲು ಇಂತಹ ಧಾರ್ಮಿಕ ಪೂಜೆ ಹಾಗೂ ಸೇವಾ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.

ತಾಲೂಕು ಯೋಜನಾಧಿಕಾರಿ ಅಜಯ್‌ಕುಮಾರ್, ಪೂಜಾ ಸಮಿತಿ ಅಧ್ಯಕ್ಷ ಎಸ್.ರಾಜು, ಅರ್ಚಕ ಸುಮತೀಂದ್ರ ನಾಡಿಗ್, ಪಪಂ ಕಂದಾಯ ಅಧಿಕಾರಿ ಡಿ.ಎಸ್.ಹೇಮಂತ್‌ಕುಮಾರ್, ಸುನೀಲ್‌ಕುಮಾರ್, ಆರ್.ಹಿಮಶ್ವೇತಾ, ಎನ್.ಕೃಷ್ಣನಾಯ್ಕ, ಎಚ್.ಕವಿತಾ, ಎನ್.ಆಶಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net