

ಸಾಗರ: ರೋಗ ಕಾಣಿಸಿಕೊಂಡಾಗ ಮಾತ್ರ ತಪಾಸಣೆಗೆ ಹೋಗಬೇಕು ಎನ್ನುವ ಕಲ್ಪನೆಯಿಂದ ಹೊರಬರಬೇಕು. ಕಾಲಕಾಲಕ್ಕೆ ತಪಾಸಣೆ ಮಾಡಿಕೊಳ್ಳುವುದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮಕ್ಕಳ ತಜ್ಞೆ ಡಾ. ಸೃಜನಾ ಹೇಳಿದರು.
ತಾಲೂಕಿನ ಹೊನ್ನೆಸರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಮಕ್ಕಳಲ್ಲಿ ಕಾಯಿಲೆ ಇದ್ದರೆ ಪ್ರಾಥಮಿಕ ಹಂತದಲ್ಲಿಯೇ ಗುರುತಿಸುವುದರಿಂದ ಶೀಘ್ರ ಗುಣಪಡಿಸಬಹುದು. ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಆರೋಗ್ಯ ತಪಾಸಣಾ ಶಿಬಿರಗಳು ಹೆಚ್ಚು ನಡೆಯಬೇಕು ಎಂದು ತಿಳಿಸಿದರು.
ಕಾಲೇಜಿನ ವ್ಯವಸ್ಥಾಪಕ ಪ್ರಶಾಂತ್ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಪಾಸಣೆ ನಡೆಸಲಾಯಿತು. ಡಾ. ನಿಖಿಲ್, ಡಾ. ಕುಮಾರ್, ಡಾ. ಮಹೇಶ್, ಡಾ. ಗಣೇಶ್, ಡಾ. ಅಮೂಲ್ಯಾ, ಡಾ. ಹರ್ಷವರ್ಧನ್, ಡಾ. ವಿವೇಕ್, ಡಾ. ವಿಶ್ವಾಸ್ ತಪಾಸಣೆ ನಡೆಸಿದರು. ಲಕ್ಷ್ಮಣ್, ನೋಡಲ್ ಅಧಿಕಾರಿ ಪ್ರದೀಪ್, ರತ್ನಾಕರ್, ನೂರ್ ಅಹ್ಮದ್, ವೇದಾವತಿ, ಜಯಂತಿ, ಶಿಲ್ಪರಾಣಿ ಇತರರು ಇದ್ದರು.