

ಆನಂದಪುರ: ಬಸವನ ಬೀದಿಯಲ್ಲಿರುವ ಐತಿಹಾಸಿಕ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವೈಭವದಿಂದ ವಾರ್ಷಿಕ ಬ್ರಹ್ಮ ರಥೋತ್ಸವ ನಡೆಯಿತು.
ಬೆಳಗ್ಗೆ ಆಗಮಿಕ ಪುರೋಹಿತ ಶ್ರೀಧರ ಭಟ್ ಕೆಂಜಗಾಪುರ ಪೌರೋಹಿತ್ಯದಲ್ಲಿ ಗಣಪತಿ ಪೂಜೆ, ಸಂಜೆ ಯಾಗಶಾಲಾ ಪ್ರವೇಶ, ರಕ್ಷಾಬಂಧನ, ಹೋಮ, ಭೇರಿ ತಾಡನ ಬಲಿ, ಪುಷ್ಪೋತ್ಸವ ಮಹಾಪೂಜೆ ನಡೆಯಿತು. ಅಲಂಕೃತ ಮಹಾರಥದಲ್ಲಿ ದೇವರ ಉತ್ಸವಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿ ರಥ ಬೀದಿಯಲ್ಲಿ ರಥ ಎಳೆಯಲಾಯಿತು.
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತರು ರಥ ಎಳೆದು ಕೃತಾರ್ಥರಾದರು. ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. 2 ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಸಂಜೆ ಮಹಾರಥದ ರಾಜಬೀದಿ ಉತ್ಸವ, ಭಜನೆ, ಸೀತಾರಾಮ ಕಲ್ಯಾಣೋತ್ಸವ, ಶ್ರೀರಾಮ ಪಟ್ಟಾಭಿಷೇಕ, ಪ್ರಸಾದ ವಿತರಣೆ ನಡೆಯಿತು. ದೇವಾಲಯ ಟ್ರಸ್ಟ್ ಪದಾಧಿಕಾರಿಗಳು, ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.