

ಶಿಕಾರಿಪುರ: ರೈತರ ಸಮಸ್ಯೆಗಳನ್ನು ಆಲಿಸಿ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಸೂಚಿಸಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ರೈತರಿಗೆ ನೀರು ಅವಶ್ಯವಿರುವ ಸಂದರ್ಭದಲ್ಲಿ ಸಿಗದಿದ್ದರೆ ಅನಾನುಕೂಲವಾಗುತ್ತದೆ. ರೈತರೊಡನೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮುಗಳಗೆರೆ ಭಾಗದ ರೈತರು ಆಗಮಿಸಿ ಬೇಸಿಗೆ ಭತ್ತದ ಬೆಳೆಗೆ ನಾಟಿಗೆ ತಯಾರು ಮಾಡುತ್ತಿದ್ದೇವೆ. ಹೆಚ್ಚಿನ ನೀರಿನ ಅಗತ್ಯವಿದ್ದು, ಈಗಾಗಲೇ ಕೊಪ್ಪದ ಕೆರೆಯಿಂದ ನೀರು ಬಿಟ್ಟಿದ್ದರೂ ಸಾಕಾಗುತ್ತಿಲ್ಲ. ಆದ್ದರಿಂದ ಇನ್ನು ಹತ್ತು ದಿನ ನೀರು ಬಿಡಲು ಅಧಿಕಾರಿಗಳಿಗೆ ಸೂಚಿಸಬೇಕು ಇಲ್ಲವಾದರೆ ಬೇಸಿಗೆ ಬೆಳೆ ರೈತರಿಗೆ ನೀರಿನ ಕೊರತೆಯಿಂದ ಸಿಗುವುದಿಲ್ಲ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿ ನೀರಾವರಿ ಇಲಾಖೆ ಇಂಜಿನಿಯರ್ ಅವರನ್ನು ಕರೆಯಿಸಿ ಸೂಚನೆ ನೀಡಿದರು.
ಅಹವಾಲು ಸ್ವೀಕಾರ ಸಭೆ ನಂತರ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ಗ್ರಾಮ ಆಡಳಿತಾಧಿಕಾರಿಗಳು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಬಿ.ವೈ.ವಿಜಯೇಂದ್ರ, ನಿಮ್ಮ ಬೇಡಿಕೆಗಳು ಸೂಕ್ತವಾಗಿದ್ದು, ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು.
ಗ್ರಾಮ ಆಡಳಿತದ ಅಧಿಕಾರಿಗಳ ಶ್ರಮದ ಅರಿವಿದೆ. ನಿಮಗೆ ಸಿಗಬೇಕಾದ ಸೌಲಭ್ಯ ಹಾಗೂ ಬೇಡಿಕೆಗಳು ಈಡೇರಬೇಕು. ಆದರೆ ಅನಿರ್ದಿಷ್ಟಾವದಿ ಮುಷ್ಕರದಿಂದ ರೈತರಿಗೆ ಮತ್ತು ಜನರಿಗೆ ತೊಂದರೆ ಆಗಬಾರದು ಎಂದು ತಿಳಿಸಿದರು. ಬಸವ ನಂದಿಹಳ್ಳಿ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಬಸವೇಶ್ವರನ ದರ್ಶನಾಶೀರ್ವಾದ ಪಡೆದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಹನುಮಂತಪ್ಪ, ರಾಘವೇಂದ್ರ, ಪಾಲಾಕ್ಷಪ್ಪ, ರೇಣುಕಸ್ವಾಮಿ, ಮುಗಳಗೆರೆ ರೈತ ಮುಖಂಡರಾದ ಮೂಕೇಶಪ್ಪ, ನಿಂಬೆಗೊಂದಿ ಸುರೇಶ್ ಇತರರಿದ್ದರು.