

ಸಾಗರ: ಕಾರ್ಮಿಕರಿಗೆ ಸರ್ಕಾರದಿಂದ ವಿವಿಧ ಸೌಲಭ್ಯ ನೀಡುತ್ತಿದ್ದು, ಕಟ್ಟಡ ಕಾರ್ಮಿಕರು ಸೇರಿ ಇತರ ಶ್ರಮಜೀವಿ ಕಾರ್ಮಿಕರಿಗೆ ಅಗತ್ಯ ಸಾಧನಾ ಸಲಕರಣೆಗಳ ಕಿಟ್ ವಿತರಿಸುವ ಮೂಲಕ ಪ್ರೋತ್ಸಾಹಿಸುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರಸಭೆ ರಂಗಮಂದಿರದಲ್ಲಿ ಕಾರ್ಮಿಕ ಇಲಾಖೆ, ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಆಯೋಜಿಸಿದ್ದ ಕಾರ್ಮಿಕರಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದರು.
ಕಾರ್ಮಿಕ ಕಾರ್ಡ್ ದುರ್ಬಳಕೆ ಆಗಬಾರದು. ಕಾರ್ಮಿಕರಲ್ಲದವರು ಕಾರ್ಡ್ ಬಳಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕಾರ್ಮಿಕರಿಗೆ ಸಂಚಾರ ಆರೋಗ್ಯ ಘಟಕ ನೀಡಿದ್ದು, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಕೆ.ಸಿದ್ದಪ್ಪ ಮಾತನಾಡಿ, ರಾಜ್ಯ ಸರ್ಕಾರ ಕಾರ್ಮಿಕರಿಗೆ ನೀಡಿರುವ ಕಾರ್ಡ್ನಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅವಕಾಶ ನೀಡಬೇಕು. ಕಾರ್ಮಿಕರು ಆರ್ಥಿಕವಾಗಿ ದುರ್ಬಲರಾಗಿರುತ್ತಾರೆ. ಅವರಿಗೆ ಅನಾರೋಗ್ಯವಾದಾಗ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಕಾರ್ಡ್ ತೋರಿಸಿದಾಗ ಚಿಕಿತ್ಸೆ ದೊರೆತರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಪ್ರಮುಖರಾದ ಐ.ಎನ್.ಸುರೇಶಬಾಬು, ಕಲಸೆ ಚಂದ್ರಪ್ಪ, ಅನಿತಾಕುಮಾರಿ, ಮಧುಮಾಲತಿ, ಗಣಪತಿ ಮಂಡಗಳಲೆ, ಜಾಕೀರ್, ವಿಲ್ಸನ್ ಗೋನ್ಸಾಲ್ವಿಸ್, ರವೀಂದ್ರ ಸಾಗರ್, ಮಂಜುನಾಥ್ ಇತರರಿದ್ದರು.