

ಸೊರಬ: ಭೂದಾಖಲೆಗಳ ಡಿಜಿಟಲೀಕರಣ ವೇಗವಾಗಿ ಸಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.
ಪಟ್ಟಣದ ತಾಲೂಕು ಕಚೇಯಲ್ಲಿ ಭೂದಾಖಲೆ ಡಿಜಿಟಲೀಕರಣ ಪರಿಶೀಲಿಸಿ ಮಾತನಾಡಿ, ತಾಲೂಕಿನಲ್ಲಿ 12.6 ಲಕ್ಷ ದಾಖಲೆಗಳು ಇದ್ದು, ಹೋಬಳಿವಾರು ಎ, ಬಿ ಎಂದು ವರ್ಗೀಕರಿಸಿ ಡಿಜಿಟಲೀಕರಣ ಮಾಡುವ ಕಾರ್ಯ ಪ್ರಾರಂಭವಾಗಿ 5 ತಿಂಗಳು ಕಳೆದಿವೆ. ಈಗಾಗಲೇ 7 ಲಕ್ಷಕ್ಕೂ ಅಧಿಕ ಪುಟಗಳು ಡಿಜಿಟಲೀಕರಣ ಆಗಿವೆ. ನಿಧಾನವಾಗಿ ಕೆಲಸ ಮಾಡುವವರನ್ನು ಬದಲಿಸಬೇಕು ಎಂದು ತಿಳಿಸಿದರು.
ಕಂದಾಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸಕಾಲ ಯೋಜನೆಯಡಿ ನೀಡುವ ಜಾತಿ, ಆದಾಯ ಪ್ರಮಾಣ ಪತ್ರ ಮತ್ತಿತರ ದಾಖಲೆಗಳನ್ನು ನೀಡುವಲ್ಲಿ ವಿಳಂಬವಾಗುತ್ತಿದೆ. ಆಧಾರ್ ಲಿಂಕ್, ಪೋಡಿ ದುರಸ್ತಿ, ಬಗರಹುಕುಂ ಅರ್ಜಿಗಳನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದರು.
ಹೆಗ್ಗೋಡು ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಬಗರ್‌ಹುಕುಂ ಮಂಜೂರಾತಿ ನಡೆದಿದೆ ಎಂದು ತಾಲೂಕು ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಸಭೆಗೂ ಮುನ್ನ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಬಗರ್‌ಹುಕುಂ ಸಮಿತಿ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಅದನ್ನು ಇಲ್ಲಿ ಪ್ರಶ್ನಿಸುವಂತಿಲ್ಲ, ಪ್ರಕರಣಕ್ಕೆ ಸಂಬಂಧಿಸಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ವರದಿ ನೀಡಿದ್ದಾರೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಬಗರ್‌ಹುಕುಂ ಸಮಿತಿ ವರದಿ ನಂತರದಲ್ಲಿ ಮುಂದಿನ ಕ್ರಮ ವಹಿಸಲಾಗುತ್ತದೆ ಎಂದರು.
ಸಾಗರ ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಶಿರಸ್ತೇದಾರ್ ಎನ್.ನಾಗರಾಜ್, ರಮೇಶ್, ಶಿವಪ್ರಸಾದ್ ಇತರರಿದ್ದರು.