ಪಾಲಕರೇ ಮಕ್ಕಳಿಗೆ ಸಂಸ್ಕಾರದ ಅರಿವು ಮೂಡಿಸಿ

25sgr2
ಸಾಗರದ ಶೃಂಗೇರಿ ಶಂಕರ ಮಠದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಸೋಂದ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಅಶ್ವಿನಿಕುಮಾರ್ ಇತರರಿದ್ದರು.
Published on

ಸಾಗರ: ಆಚರಣೆಗಿಂತ ಆಡಂಬರವೇ ಹೆಚ್ಚುತ್ತಿದೆ. ಕಾಲಕಾಲಕ್ಕೆ ಮಕ್ಕಳಿಗೆ ಸಂಸ್ಕಾರ ನೀಡುವ ಜವಾಬ್ದಾರಿಯನ್ನು ಪಾಲಕರು ತೆಗೆದುಕೊಳ್ಳಬೇಕು ಎಂದು ಸೋಂದ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ನಗರದ ಶೃಂಗೇರಿ ಶಂಕರಮಠದ ಭಾರತೀತೀರ್ಥ ಸಭಾಂಗಣದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ಬಾಲ್ಯದಲ್ಲಿ ಭಗವದ್ಗೀತೆ ಕಂಠಪಾಠ ಮಾಡುವ ಮಕ್ಕಳು ದೊಡ್ಡವರಾದ ಮೇಲೆ ಮರೆತು ಬಿಡುತ್ತಾರೆ. ಕಲಿತಿದ್ದನ್ನು ಮರೆಯುವ ಸಂಸ್ಕೃತಿ ಒಳ್ಳೆಯದಲ್ಲ ಎಂದು ತಿಳಿಸಿದರು.

ಪಾಲಕರು ಮೊದಲು ಮಕ್ಕಳಿಗೆ ನಮ್ಮ ಸಂಸ್ಕೃತಿಯ ಶ್ರೇಷ್ಠತೆಯನ್ನು ತಿಳಿಸಿ ಕೊಡಬೇಕು. ನಮ್ಮತನ ಮರೆತರೆ ಬದುಕು ಶ್ರೇಷ್ಠ ಎನಿಸಿಕೊಳ್ಳುವುದಿಲ್ಲ. ಎಲ್ಲರೂ ಡಾಕ್ಟರ್, ಇಂಜಿನಿಯರ್ ಆಗುವ ಕನಸು ಕಾಣುತ್ತಿದ್ದಾರೆ. ನಮ್ಮ ಸನಾತನ ಸಂಸ್ಕೃತಿ ಧರ್ಮವನ್ನು ಉಳಿಸುವ ವೇದಾಧ್ಯಯನ ಮಾಡುವ ಮನೋಪ್ರವೃತ್ತಿಯಿಂದ ಹಿಂದೆ ಸರಿಯುತ್ತಿರುವುದು ಒಳ್ಳೆಯದಲ್ಲ ಎಂದರು.

ಹಿಂದು ಧರ್ಮಕ್ಕೆ ಹೊರಗಿನವರ ಆಪತ್ತು ಯಾವಾಗಲೂ ಇದ್ದದ್ದೆ. ಆದರೆ ಒಳಗಿನಿಂದಲೇ ನಡೆಸುತ್ತಿರುವ ಆಪತ್ತನ್ನು ಮೊದಲು ತಡೆಯುವ ಪ್ರಯತ್ನ ಆಗಬೇಕು. ಶ್ರೀ ಆದಿ ಶಂಕರಾಚಾರ್ಯರು ಸ್ತೋತ್ರ ಸಾಹಿತ್ಯದ ಮೂಲಕ ಭಗವಂತನ ಮಹತ್ವವನ್ನು ನಮಗೆ ಪರಿಚಯಿಸಿಕೊಟ್ಟರು. ಗೀತೆ ಮತ್ತು ಸ್ತೋತ್ರದ ಅಧ್ಯಯನ ಮನುಷ್ಯನನ್ನು ಸಂಸ್ಕಾರ ಹೀನತೆಯಿಂದ ದೂರ ಸರಿಸುತ್ತದೆ. ಭಕ್ತಿಯ ಮಹತ್ವ ಪರಿಚಯಿಸುತ್ತದೆ ಎಂದು ತಿಳಿಸಿದರು.

ಭಗವದ್ಗೀತೆ ಅಧ್ಯಯನ ಸನ್ಮಾರ್ಗವನ್ನು ತೋರಿಸುವ ಜತೆಗೆ ಬದುಕಿನ ಮಾರ್ಗದರ್ಶನ ಮಾಡುತ್ತದೆ. ಮನುಷ್ಯ ಜನ್ಮ ಸಾರ್ಥಕ ಆಗಬೇಕಾದರೆ ಧ್ಯಾನ, ಅಧ್ಯಾತ್ಮ, ಧರ್ಮಗ್ರಂಥಗಳ ಪಠಣ, ಶ್ರವಣದಂತಹ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.

ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಸೋಂದ ಸ್ವರ್ಣವಲ್ಲಿ ಮಠ

ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಮಾತನಾಡಿ, ಶೃಂಗೇರಿ ಮತ್ತು ಸ್ವರ್ಣವಲ್ಲಿ ಮಠದ ನಡುವೆ ಅವಿನಾಭಾವ ಸಂಬಂಧವಿದೆ. ಶ್ರೀಗಳು ಧಾರ್ಮಿಕ ಕಾರ್ಯದ ಜತೆಗೆ ಪರಿಸರ ಪರವಾದ ಕಾಳಜಿ ಇರಿಸಿಕೊಂಡಿದ್ದಾರೆ. ಉತ್ತರ ಕನ್ನಡ ಭಾಗದ ಅನೇಕ ಪರಿಸರ ಹೋರಾಟಕ್ಕೆ ಶ್ರೀಗಳು ಮಾರ್ಗದರ್ಶನ ನೀಡಿದ್ದಾರೆ ಎಂದರು.

ವೇದಬ್ರಹ್ಮ ಸುಪ್ರತೀಕ್ ಭಟ್, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಮಧುಕರ ನರಸಿಂಹ ಹೆಗಡೆ, ಮ.ಸ.ನಂಜುಂಡಸ್ವಾಮಿ, ಶೇಷಗಿರಿ ಹೆಗಡೆ, ನಗರಸಭಾ ಸದಸ್ಯ ಬಿ.ಎಚ್.ಲಿಂಗರಾಜ್, ಸವಿತಾ ಶ್ರೀಕಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net