

ಶಿವಮೊಗ್ಗ: ತಾಲೂಕಿನ ಸಂತೆಕಡೂರಿನ ಗ್ರಾಮ ಪಂಚಾಯಿತಿ ಎದುರು ಗುರುವಾರ 90 ವರ್ಷದ ವೃದ್ಧೆಯ ಅಂತ್ಯಸಂಸ್ಕಾರ ವೇಳೆ ಹೈಡ್ರಾಮವೇ ನಡೆದಿದ್ದು ಅಂತಿಮವಾಗಿ ಪೊಲೀಸರ ಮಧ್ಯೆಪ್ರವೇಶದಿಂದ ಪ್ರಕರಣ ಸುಖಾಂತ್ಯ ಕಂಡಿತು.
ಸಂತೆಕಡೂರಿನಲ್ಲಿ ಗುರುವಾರ ಬೆಳಗ್ಗೆ 90 ವರ್ಷದ ವೃದ್ಧೆ ರಂಗಮ್ಮ ಅವರು ಮೃತಪಟ್ಟಿದ್ದರು. ಸಂಬಂಧಿಕರು ಸ್ಮಶಾನದಲ್ಲಿ ವೃದ್ಧೆಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ವ್ಯಕ್ತಿಯೊಬ್ಬರು ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದರೆಂಬ ಕಾರಣಕ್ಕೆ ಗ್ರಾಪಂ ಕಚೇರಿ ಆವರಣದಲ್ಲೇ ಗುಂಡಿ ತೆಗೆದು ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದು ಗೊಂದಲ ಸೃಷ್ಟಿಯಾಗಿತ್ತು.
ಗ್ರಾಮದಲ್ಲಿ ಎಲ್ಲ ವರ್ಗದ ಜನರ ಅಂತ್ಯಸಂಸ್ಕಾರಕ್ಕಾಗಿ 1.30 ಎಕರೆ ಸ್ಮಶಾನ ಮೀಸಲಿದೆ. ಆದರೆ ಗ್ರಾಪಂ ಕಚೇರಿ ಆವರಣದಲ್ಲೇ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರಿಂದ ಇಡೀ ಗ್ರಾಮದಲ್ಲಿ ಬಿಗಿವಿನ ವಾತಾವರಣ ಸೃಷ್ಟಿಯಾಗಿತ್ತು.
ಗ್ರಾಪಂ ಪಿಡಿಒ ಟಿ.ಸಿ.ಬ್ಯಾಟೇಗೌಡ ಸೇರಿ ಅಧಿಕಾರಿಗಳು, ಕೆಲ ಸದಸ್ಯರು ಮನವಿ ಮಾಡಿದರೂ ಸಂಬಂಧಿಕರು ಮಾತು ಕೇಳಲಿಲ್ಲ. ಅಧಿಕಾರಿಗಳು ಗ್ರಾಪಂ ಆವರಣದಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸಂಬಂಧಿಕರು ಕಚೇರಿ ಎದುರೇ ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಕೊನೆಗೆ ಗ್ರಾಪಂ ಅಧಿಕಾರಿಗಳು ತುಂಗಾನಗರ ಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು ಸ್ಥಳಕ್ಕೆ ತೆರಳಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು. ಅಂತಿಮವಾಗಿ ಸಂಬಂಧಿಕರು ಗ್ರಾಮದ ಮೀಸಲಿದ್ದ ಸ್ಮಶಾನದಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದರು.