

ಶಿವಮೊಗ್ಗ: ನ್ಯಾಯ ಎಂಬುದು ದಾನದ ರೂಪದಲ್ಲಿ ಇರಬೇಕೇ ಹೊರತು ಮಾರಾಟದ ಸರಕು ಎನ್ನಿಸಿಕೊಳ್ಳಬಾರದು. ಅದೇ ರೀತಿ ನ್ಯಾಯ ಒದಗಿಸಲು ನಿರಾಕರಿಸುವುದು, ವಿಳಂಬ ನ್ಯಾಯದಾನವೂ ಸಮ್ಮತವಲ್ಲ. ಈ ಆಶಯ ಈಡೇರಲು ವಕೀಲರು ಹಾಗೂ ನ್ಯಾಯಾಧೀಶರ ಪಾತ್ರ ಮಹತ್ವದ್ದಾಗಿದೆ ಎಂದು ಹೈಕೋರ್ಟ್ ನ್ಯಾಯಾಧೀಶ ಕೃಷ್ಣ ಎಸ್.ದೀಕ್ಷಿತ್ ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯಿಂದ ಶನಿವಾರ ಏರ್ಪಡಿಸಿದ್ದ ಸಿಬಿಆರ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಘಟಿಕೋತ್ಸವ ಹಾಗೂ ಅಮೃತ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಲಯ ಎಂಬುದು ಅಂಗಡಿಯಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ನ್ಯಾಯ ಎಂಬುದು ಮಾರಟದ ಸರಕಾಗಬಾರದು. ವಕೀಲರು ಕಾನೂನಿನೊಂದಿಗೆ ಸಾಮರಸ್ಯ ಹೊಂದಿರಬೇಕೆಂದು ತಿಳಿಸಿದರು.
ವಕೀಲಿ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು. ತಮ್ಮ ಕಕ್ಷೀದಾರನ ಬಳಿ ವಕೀಲರು ದುಬಾರಿ ಶುಲ್ಕ ಪಡೆಯಬಾರದು. ಆತ ನೀಡಿದಷ್ಟು ಶುಲ್ಕವನ್ನು ಮಾತ್ರ ಪಡೆಯಬೇಕು ಎಂಬುದು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿನ ನಂಬಿಕೆ. ಆರ್ಥಿಕವಾಗಿ ಸಬಲರಾದವರಿಂದ ಸ್ವಲ್ಪ ಹೆಚ್ಚಿನ ಶುಲ್ಕ ಪಡೆದರೆ ಅಭ್ಯಂತರವಿಲ್ಲ. ಆದರೆ ಕ್ಷಕೀದಾರರಿಗೆ ಶುಲ್ಕವೇ ಹೊರೆಯಾಗಬಾರದು ಎಂದರು.
ಕುಲಭೂಷಣ್ ಪ್ರಕರಣದಲ್ಲಿ ಹೆಸರಾಂತ ವಕೀಲ ಹರೀಶ್ ಸಾಳ್ವೆ ಕೇವಲ ಒಂದು ರೂ. ಶುಲ್ಕ ಪಡೆದು ಅಂತರಾಷ್ಟ್ರೀಯ ನ್ಯಾಯಾಲಯಾದಲ್ಲಿ ವಾದ ಮಂಡನೆ ಮಾಡಿದ್ದು ನಮಗೆಲ್ಲರಿಗೂ ಮಾದರಿಯಾಗಬೇಕು. ವಕೀಲರು ಕನಿಷ್ಠ ತತ್ವ, ಸಿದ್ಧಾಂತ, ಮೌಲ್ಯಗಳನ್ನು ಇಟ್ಟುಕೊಳ್ಳಬೇಕೆಂದು ಸಮಾಜ ಬಯಸುತ್ತದೆ ಎಂದು ತಿಳಿಸಿದರು.
ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ, ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್, ಕಾರ್ಯದರ್ಶಿ ಎಸ್.ಎನ್.ನಾಗರಾಜ್, ಉಪಾಧ್ಯಕ್ಷ ಸಿ.ಆರ್.ನಾಗರಾಜ್, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ, ಸಿಬಿಆರ್ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಆರ್.ಜಗದೀಶ್ ಉಪಸ್ಥಿತಿರಿದ್ದರು.