ವಿಶ್ವ ಮಟ್ಟದ ಸಾಧನೆಗೆ ಎನ್‌ಇಪಿ ಪೂರಕ

sahaydri
Published on

ಶಿವಮೊಗ್ಗ: ಭಾರತದ ವಿಶ್ವವಿದ್ಯಾಲಯಗಳು ವಿಶ್ವ ಮಟ್ಟದಲ್ಲಿ ಗಮನಸೆಳೆಯುವಂತಹ ಸಾಧನೆ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿ ಅನುಕೂಲಕರವಾಗಲಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಕುವೆಂಪು ವಿವಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ಕುವೆಂಪು ವಿವಿ ರಾಜ್ಯಶಾಸ ಉಪನ್ಯಾಸಕರ ಸಂಘದಿಂದ ಗುರುವಾರ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಶಿಕ್ಷಣ ನೀತಿ ಸಮಪರ್ಕವಾಗಿ ಅನುಷ್ಟಾನಗೊಂಡ ಬಳಿಕ ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಸುಧಾರಣೆಯನ್ನು ಮೊದಲ ಬಾರಿಗೆ ಜಾರಿಗೆ ತಂದಿರುವುದು ನಮ್ಮ ರಾಜ್ಯ. ಕುವೆಂಪು ವಿವಿ ಹೊಸ ನೀತಿಗೆ ಸಂಪೂರ್ಣ ಸಹಕಾರ ನೀಡಿದೆ. ರಾಷ್ಟ್ರಿಯ ಶಿಕ್ಷಣ ನೀತಿ ಅನುಷ್ಟಾನಕ್ಕೆ ಪೂರಕವಾಗಿ ಹಲವಾರು ಕಾರ್ಯಾಗಾರಗಳು, ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ವಿವಿಯ ಅಧ್ಯಯನದ ಗುಣಮಟ್ಟ ವೃದ್ಧಿಗೆಂದು ಸ್ಮಾರ್ಟ್ ಕ್ಲಾಸ್ ಅಳವಡಿಸಿಕೊಳ್ಳಲಾಗಿದೆ. ಸಂಶೋಧನೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಮಾತನಾಡಿ, ಶಿಕ್ಷಣದ ಮೂಲಕ ಅನೇಕ ಅವಕಾಶ ದೊರೆಯುತ್ತವೆ. ಅದರಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣದ ಮೌಲ್ಯವನ್ನು ಹೆಚ್ಚಿಸುತ್ತದೆ. ನಾವು ಕಟ್ಟಡಗಳನ್ನು ಕಟ್ಟುವುದು ಮುಖ್ಯವಲ್ಲ, ವಿದ್ಯಾರ್ಥಿಗಳಲ್ಲಿ ಜ್ಞಾನದ ಸೌಧ ನಿರ್ಮಾಣ ಮಾಡುವ ಮೂಲಕ ರಾಷ್ಟ್ರವನ್ನು ಭದ್ರಗೊಳಿಸಬೇಕೆಂದರು.

ಮೈಸೂರಿನ ಯುಜಿಸಿ ಹೆಚ್‌ಆರ್‌ಡಿಸಿ ನಿವೃತ್ತ ನಿರ್ದೇಶಕ ಪ್ರೊ.ರಾಜಶೇಖರ್, ಪ್ರಾಚಾರ್ಯ ಡಾ.ಕೆ.ಬಿ.ಧನಂಜಯ, ತುಮಕೂರು ವಿವಿ ಕುಲಸಚಿವ ಡಾ. ಪ್ರಸನ್ನಕುಮಾರ್, ಕುವೆಂಪು ವಿವಿಯ ಇತಿಹಾಸ ವಿಭಾಗದ ಪ್ರಾಧ್ಯಾಪಕ ವೆಂಕಟೇಶ್ ಉದ್ದಗಟ್ಟಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net