

ಸಾಗರ: ನಗರದ ವಿವಿಧೆಡೆ 9 ಲಕ್ಷ ರೂ. ವೆಚ್ಚದಲ್ಲಿ ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ತಿಳಿಸಿದರು.
ನಗರದ ನೆಹರು ಮೈದಾನದಲ್ಲಿ ನಗರಸಭೆಯಿಂದ ಅಳವಡಿಸಿದ ಮೂರು ಹೈಮಾಸ್ಟ್ ವಿದ್ಯುತ್ ದೀಪಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಮೈದಾನದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಶಾಸಕರಿಗೆ ಮನವಿ ಮಾಡಿದ್ದು, ವಿಶೇಷ ಆದ್ಯತೆ ನೀಡುವ ಮೂಲಕ ಈಗ ಅಳವಡಿಸಲಾಗಿದೆ. ಇನ್ನುಳಿದ ಕಡೆಗಳಲ್ಲೂ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರದ 31 ವಾರ್ಡ್ಗಳಲ್ಲಿ ಸ್ವಚ್ಛತೆ, ಬೀದಿದೀಪ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶಾಸಕರು ನಡೆಸಿದ ಜನಸಂಪರ್ಕ ಸಭೆಯಲ್ಲಿ ಬಂದಿದ್ದ ದೂರುಗಳನ್ನು ಪರಿಶೀಲಿಸಿ ಪರಿಹರಿಸಲಾಗಿದೆ ಎಂದರು. ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಮಧುಮಾಲತಿ, ಸೈಯದ್ ಜಾಕೀರ್, ಲಲಿತಮ್ಮ, ಸುರೇಶಬಾಬು, ರವಿಕುಮಾರ್, ವಾಯುವಿಹಾರಿ ಸಂಘದ ಪ್ರಮುಖರು ಹಾಜರಿದ್ದರು.