

ಶಿವಮೊಗ್ಗ: ಯಾವುದು ಸತ್ಯವೋ ಅದನ್ನು ಹುಡುಕುವ ಮಾರ್ಗದಲ್ಲಿ ನಾವು ನಡೆಯಬೇಕು. ನಮಗೆ ಗೋಚರ ಆಗುವುದು ಮಿಥ್ಯ, ಅದು ನಶ್ವರ. ನಾವು ಪಾರಮಾರ್ಥಿಕ ಚಿಂತನೆ ಮಾಡಬೇಕು ಎಂದು ತಲಕಾಡು ಶಂಕರ ಪೀಠದ ಶ್ರೀ ಗೋವಿಂದಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.
ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಮಂಗಳವಾರ ಲಕ್ಷ ಮೋದಕ ಯಾಗದ ಪೂರ್ಣಾಹುತಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಶಂಕರ ಭಗವತ್ಪಾದರು ಮೋಕ್ಷ ಸಾಧನೆಗೆ ಎಲ್ಲರೂ ಪ್ರಯತ್ನಿಸುವಂತೆ ಕರೆ ನೀಡಿದ್ದರು. ಆದರೆ ನಾವು ಅದೊಂದನ್ನು ಬಿಟ್ಟು ಉಳಿದೆಲ್ಲವನ್ನೂ ಮಾಡುತ್ತಿದ್ದೇವೆ ಎಂದರು.
ಜಗತ್ತಿನಲ್ಲಿ ಶ್ರೀಕಷ್ಣ ಬಿಟ್ಟರೆ ಶಂಕರರು ಮಾತ್ರ ಜಗದ್ಗುರುಗಳು. ಅವರ ಪರಂಪರೆಯಲ್ಲಿ ಬಂದ ಕಾರಣಕ್ಕೆ ನಮ್ಮನ್ನೂ ಜಗದ್ಗುರುಗಳು ಎಂದು ಕರೆಯಲಗುತ್ತಿದೆ. ಶಂಕರರ ಪ್ರಥಮ ಕೃತಿ ಯಾವುದೆಂಬುದೇ ನಮಗೆ ತಿಳಿದಿಲ್ಲ. ಕನಕಧಾರಾ ಸ್ತೋತ್ರದ ಬಗ್ಗೆಯೂ ನಮಗೆ ಮಾಹಿತಿಯಿಲ್ಲ. ದಾರಿದ್ರೃ, ಕಷ್ಟಗಳು ಬಂದಾಗ ಮಾತ್ರ ಭಗವಂತನ ನಾಮಸ್ಮರಣೆ ಮಾಡುತ್ತೇವೆ ಎಂದು ಹೇಳಿದರು.
ವ್ಯಕ್ತಿ ಯಾವ ವಿಧದಲ್ಲಿ ಜೀವಿಸಬೇಕೆಂಬುದನ್ನು ಆದಿಶಂಕರರು ವಿವರಿಸಿದ್ದಾರೆ. ಎಲ್ಲರಿಗೂ ಮನನ ಆಗುವಂತೆ ವಿಚಾರಧಾರೆಯನ್ನು ನೀಡಿದ್ದಾರೆ. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ನಾವು ಮರೆತಿರುವುದು ದುರದೃಷ್ಟಕರ ಎಂದರು.
ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ್, ಭಾರತ ಪರಿಕ್ರಮದ ಸಾಧಕ ಸೀತಾರಾಮ ಕೆದಿಲಾಯ ಉಪಸ್ಥಿತರಿದ್ದರು.