ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಿ

16 sgr 2
ಸಾಗರದಲ್ಲಿ ಧಾರವಾಡದ ವಿದ್ಯಾಪೋಷಕ್‌ನಿಂದ ಏರ್ಪಡಿಸಿದ್ದ ಐದು ದಿನಗಳ ವಸತಿ ಸಹಿತ ಸೇತುಬಂಧ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಡಾ. ರಾಜನಂದಿನಿ ಕಾಗೋಡು, ಅಶ್ವಿನಿಕುಮಾರ್, ಗಣಪತಿ ಹೆನಗೆರೆ, ನಂಜುಂಡಸ್ವಾಮಿ ಇತರರಿದ್ದರು.
Published on

ಸಾಗರ: ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ಶಿಕ್ಷಣದ ಸೌಲಭ್ಯಗಳನ್ನು ಸದ್ವಿನಿಯೋಗ ಮಾಡಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ರೋಟರಿ ರಕ್ತನಿಧಿ ಕೇಂದ್ರದ ಗೌರವಾಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಹೇಳಿದರು.

ಸಾಗರದ ಭಾರತೀತೀರ್ಥ ಸಭಾಭವನದಲ್ಲಿ ಧಾರವಾಡದ ವಿದ್ಯಾಪೋಷಕ್‌ನಿಂದ ಏರ್ಪಡಿಸಿದ್ದ ಐದು ದಿನಗಳ ವಸತಿ ಸಹಿತ ಸೇತುಬಂಧ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಶಿಕ್ಷಣ ಮುಂದುವರಿಸಲು ಅಗತ್ಯ ಸಹಕಾರ ನೀಡುವುದು ವಿದ್ಯಾಪೋಷಕ್ ಉದ್ದೇಶ ಎಂದು ತಿಳಿಸಿದರು.

ಅರ್ಹರಿಗೆ ಸೌಲಭ್ಯ ತಲುಪಿಸುವ ಕೆಲಸ ಪ್ರಾಮಾಣಿಕವಾಗಿ ಆಗುತ್ತಿದೆ. ಸಂಸ್ಥೆಯಿಂದ ಸಹಕಾರ ಪಡೆದ ಮಕ್ಕಳು ಉತ್ತಮ ಸ್ಥಾನಕ್ಕೆ ಹೋಗುವ ಜತೆಗೆ ಇತರರಿಗೆ ನೆರವು ನೀಡುವ ಸಂಕಲ್ಪ ಕೈಗೊಳ್ಳಬೇಕು. ಹಣಕಾಸಿನ ನೆರವಿನ ಜತೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ತರಬೇತಿಯನ್ನು ಸಹ ವಿದ್ಯಾಪೋಷಕ್ ಒದಗಿಸುತ್ತಿದೆ ಎಂದರು.

ವಿದ್ಯಾಪೋಷಕ್ ಜಿಲ್ಲಾ ಸಂಚಾಲಕ ಅಶ್ವಿನಿಕುಮಾರ್ ಮಾತನಾಡಿ, ವಿದ್ಯಾಪೋಷಕ್ ಧಾರವಾಡದಲ್ಲಿ ಕೇಂದ್ರ ಸ್ಥಾನ ಹೊಂದಿದ್ದರೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದ್ವಿತೀಯ ಪಿಯು ನಂತರ ಮಕ್ಕಳು ಆರ್ಥಿಕ ಸಂಕಷ್ಟದಿಂದ ಶಿಕ್ಷಣ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ನೆರವು ನೀಡುತ್ತಿದ್ದು, ತರಬೇತಿ ನೀಡಿ ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಸಜ್ಜುಗೊಳಿಸುತ್ತಿದೆ. ಐದು ದಿನಗಳ ಶಿಬಿರದಲ್ಲಿ ರಾಜ್ಯದ ಬೇರೆಬೇರೆ ಜಿಲ್ಲೆಗಳ 64ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಅಗತ್ಯ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು. ಪ್ರಮುಖರಾದ ಮ.ಸ.ನಂಜುಂಡಸ್ವಾಮಿ, ಗಣಪತಿ ಹೆನಗೆರೆ, ಎ.ಎಂ.ನಾಯಕರ, ದಿವ್ಯಶ್ರೀ, ಬಿಂದು ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net