ದೇಶ ಜಾತಿ, ಭಾಷೆ ಮೀರಿದವರು ಮಹಾಯೋಗಿ ವೇಮನ: ಶಾಸಕ ಕೆ.ಎಸ್.ಈಶ್ವರಪ್ಪ

19 smg 6
Published on

ಶಿವಮೊಗ್ಗ: ಮಹಾಪುರುಷ ಮಹಾಯೋಗಿ ವೇಮನ ಅವರು ದೇಶ, ಜಾತಿ, ಭಾಷೆಯನ್ನೂ ಮೀರಿದವರು. ಅವರ ಆದರ್ಶ, ಮಾರ್ಗದರ್ಶನ ಇಂದಿನ ಕಾಲಕ್ಕೂ ಪ್ರಸ್ತುತ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ರೆಡ್ಡಿ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾಯೋಗಿ ವೇಮನ ಜಗತ್ತಿನ ಎಲ್ಲ ಮಹಾಪುರುಷರ ಪ್ರತಿನಿಧಿ. ಒಂದು ಕಾಲಮಾನಕ್ಕೆ ಸೀಮಿತವಾಗಿಲ್ಲ. ಒಂದು ಜಾತಿಗೆ ಒಳಪಟ್ಟಿಲ್ಲ. ಒಂದೇ ಭಾಷೆ ಮತ್ತು ದೇಶಕ್ಕೆ ಒಳಗಾಗಿಲ್ಲ. ಅಂತಹ ಮಹಾಪುರುಷನ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಬೇಕಿದೆ ಎಂದರು.

ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳುವರ್, ತೆಲುಗಿನ ವೇಮನ, ಬುದ್ಧ, ಬಸವಣ್ಣ, ಡಾ. ಬಿ.ಆರ್.ಅಂಬೇಡ್ಕರ್ ಅವರಂತಹ ಅನೇಕ ಮಹಾಪುರುಷರು ಯಾವುದೇ ಜಾತಿ, ಮತ, ಧರ್ಮಕ್ಕೆ ಸೀಮಿತವಲ್ಲ. ಎಲ್ಲ ಸಮಾಜಕ್ಕೂ ದಾರಿದೀಪವಾಗಿದ್ದಾರೆ. ಅದರಲ್ಲಿ ವೇಮನರು ಕೂಡ ನಮ್ಮ ಸಮಾಜದ ಹೆಮ್ಮೆಯ ಪುರುಷರಾಗಿದ್ದು ಇಂತಹ ಮಹಾನ್ ವ್ಯಕ್ತಿಯನ್ನು ಇಂದಿನ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕೆಂದು ಎಂದು ಹೇಳಿದರು.

ಮೇಯರ್ ಎಸ್.ಶಿವಕುಮಾರ್, ಉಪ ಮಹಾಪೌರರಾದ ಲಕ್ಷ್ಮೀ ಶಂಕರನಾಯ್ಕ, ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಭೀಮಾ ರೆಡ್ಡಿ, ಎಡಿಸಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ , ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಕೆ.ಆರ್.ವೇಣುಗೋಪಾಲರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net