

ಸೊರಬ: ಮಾನವ ಸಮಯ ವ್ಯರ್ಥ ಮಾಡದೆ ಒಳ್ಳೆಯ ಕಾರ್ಯ ಅನುಷ್ಠಾನ ಮಾಡುವುದಕ್ಕೆ ವಿನಿಯೋಗಿಸಬೇಕು ಎಂದು ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಚಾಮರಾಜಪೇಟೆ ಕಾನುಕೇರಿಯ ಮಠದಲ್ಲಿ ಸದ್ಗುರು ಸೇವಾ ಟ್ರಸ್ಟ್, ಅಕ್ಕನ ಬಳಗ ಸೇವಾ ಟ್ರಸ್ಟ್, ಟೌನ್ ವೀರಶೈವ ಸಮಾಜ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ವಚನ ಶ್ರಾವಣ ಸಂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶರಣ ಸಾಹಿತ್ಯದ ಚಿಂತನೆ ಅರಿಯಲು ವಚನ ಶ್ರಾವಣ ಸಂಜೆ ಕಾರ್ಯಕ್ರಮ ಪೂರಕವಾಗಿದೆ. ಧಾರ್ಮಿಕ ಆಲೋಚನೆ ಮತ್ತು ಶರಣರು ಸಮಾಜವನ್ನು ಕಟ್ಟಲು ಶ್ರಮಿಸಿದ ಹೋರಾಟದ ಚಿಂತನೆ ಕುರಿತು ಅರಿವು ಮೂಡಿಸಲು ಈ ಕಾರ್ಯಕ್ರಮ ಅರ್ಥಪೂರ್ಣ ಎಂದು ತಿಳಿಸಿದರು.
ಶಿಕ್ಷಕ ಹಾಲೇಶ್ ನವುಲೆ ಮಾತನಾಡಿ, ಶ್ರಾವಣ ಹಬ್ಬಗಳ ಆಚರಣೆಯ ಸಂಭ್ರಮದ ಕಾಲ. ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆ ಮಾಡುವ ಅವಧಿ. ಜನರಲ್ಲಿ ಜಾಗೃತಿ ಮೂಡಿಸುವ ವಚನಗಳನ್ನು ಬಸವಣ್ಣ ಅವರು ರಚಿಸಿದ್ದರು. ಭಕ್ತಿಗೆ ಜಾತಿ, ಧರ್ಮ ಅಂತಸ್ತಿನ ಬೇಧವಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲಗೌಡ ಅಂಕರವಳ್ಳಿ ಮಾತನಾಡಿ, ವಚನಗಳನ್ನು ವಿಶ್ಲೇಷಣೆ ಮಾಡುವ ಶ್ರಾವಣ ಸಂಜೆ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುತ್ತದೆ. ವಚನ ಸಾಹಿತ್ಯದ ಮೂಲಕ ಸಮ ಸಮಾಜದ ಕನಸು ಕಂಡ ಮಹಾನ್ ವಚನಕಾರ ಬಸವಣ್ಣ ಎಂದು ಹೇಳಿದರು.
ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್, ವೀರಶೈವ ಟೌನ್ ಘಟಕದ ಅಧ್ಯಕ್ಷ ವಿಶ್ವನಾಥ ಗೌಡ, ವಿ.ಬಿ.ಜಾವೂರ್, ಸಮಾಜ ಸೇವಕ ನಾಗರಾಜ್ ಗುತ್ತಿ, ಚಂದ್ರಶೇಖರ್ ನಿಜಗುಣ, ಗಂಗಾಧರ, ಜಯಮಾಲಾ, ಜ್ಯೋತಿ, ಪೂರ್ಣಿಮಾ ಶಿವಯೋಗಿ, ಲತಾ ಮಹೇಶ್ ಇತರರಿದ್ದರು.