

ಸೊರಬ: ರೈತರು ಜಾನುವಾರು ಕಾಯಿಲೆಗಳ ಬಗ್ಗೆ ಜಾಗೃತಿ ಹೊಂದುವ ಜತೆಗೆ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರಗೌಡ ಹೇಳಿದರು.
ತಾಲೂಕಿನ ತೆವರತೆಪ್ಪ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ತೆವರತೆಪ್ಪ ಹಾಲು ಉತ್ಪಾದಕರ ಸಹಕಾರ ಸಂಘ, ಎಣ್ಣೆಕೊಪ್ಪ ಗ್ರಾಪಂ ಆಶ್ರಯದಲ್ಲಿ ಏರ್ಪಡಿಸಿದ್ದ ಮಿಶ್ರತಳಿ ಹಸು, ಮಣಕ ಮತ್ತು ಕರುಗಳ ಪ್ರದರ್ಶನ, ಬರಡು ಜಾನುವಾರು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಹೈನುಗಾರಿಕೆ ಅವಶ್ಯಕ. ಇದರಿಂದ ಕುಟುಂಬಗಳು ಆರ್ಥಿಕ ಬಲವರ್ಧನೆ ಸಾಧಿಸುವ ಜತೆಗೆ ಮಹಿಳೆಯರು ಸ್ವಾವಲಂಬಿ ಜೀವನ ಮಾಡಲು ಅನುಕೂಲವಾಗುತ್ತದೆ. ತೆವರತೆಪ್ಪ ಗ್ರಾಮದಲ್ಲಿ ಜಾನುವಾರು ಸಾಕಣೆ ಹಾಗೂ ಹಾಲು ಉತ್ಪಾದನೆ ಹೆಚ್ಚಿದೆ ಎಂದರು.
ಹೈನುಗಾರಿಕೆ ಬಗ್ಗೆ ಜನರಲ್ಲಿ ಮಾಹಿತಿ ಕೊರತೆ ಇದ್ದು, ಸೂಕ್ತ ಮಾಹಿತಿ ಪಡೆದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬಹುದು. ಡಾ. ಪ್ರದೀಪ್‌ಕುಮಾರ್ ಸಹಾಯಕ ನಿರ್ದೇಶಕ, ಪಶುಪಾಲನಾ ಇಲಾಖೆ
ಮಾವಲಿ ಪಶು ಆಸ್ಪತ್ರೆ ಪಶು ವೈದ್ಯಾಧಿಕಾರಿ ಡಾ. ಟೋಕಪ್ಪ ಅವರು ಜಾನುವಾರು ಬೆಳವಣಿಗೆ, ಕಾಯಿಲೆ, ಸ್ವಚ್ಛತೆ ಹಾಗೂ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಎನ್.ಆರ್.ಪ್ರದೀಪ್‌ಕುಮಾರ್, ಎಣ್ಣೆಕೊಪ್ಪ ಗ್ರಾಪಂ ಮಾಜಿ ಉಪಾಧ್ಯಕ್ಷ ಸೋಮಶೇಖರಪ್ಪ, ತೆವರತೆಪ್ಪ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕಲ್ಲಪ್ಪ ಬಣಕಾರ್, ಉಪಾಧ್ಯಕ್ಷ ಶಶಿ ಜಟ್ಟೇರ್, ಪಶು ವೈದ್ಯಾಧಿಕಾರಿ ಡಾ. ಜಗದೀಶ್‌ಕುಮಾರ್, ಡಾ. ನವೀನ್‌ಕುಮಾರ್, ಡಾ. ಸಚಿನ್, ಡಾ. ಯುವರಾಜ್, ಡಾ. ನಿರಂಜನ್, ಉದ್ರಿ ಪಶು ವೈದ್ಯಾಧಿಕಾರಿ ಡಾ. ದಿವ್ಯಾ, ಲೋಕ್ಯನಾಯ್ಕ, ಪರಿವೀಕ್ಷಕ ರಂಗಪ್ಪ, ಮುಖಂಡರಾದ ರುದ್ರಪ್ಪ ಕಡ್ಳೇರ್, ಚಂದ್ರಪ್ಪ ಇದ್ದರು.