

ಸೊರಬ: ಭೂಹೋರಾಟ ಹಾಗೂ ರೈತರಿಗೆ ಭೂಮಿ ಕೊಡಿಸಿದ ತೃಪ್ತಿ ನನಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ತಾಲೂಕಿನ ಕಾಸವಾಡಿಕೊಪ್ಪ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರಾಮಸ್ಥರಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಭೂಮಿ ಹೋರಾಟಕ್ಕೆ ಮುನ್ನುಡಿ ಬರೆದಿದ್ದು ಸೊರಬ ಹಾಗೂ ಸಾಗರ ತಾಲೂಕುಗಳು. ಕಾಸವಾಡಿಕೊಪ್ಪ ಗ್ರಾಮದಲ್ಲಿ ಸನ್ಮಾನ ಸ್ವೀಕರಿಸಿರುವುದು ಸಂತಸ ತಂದಿದೆ. ನಮ್ಮೊಂದಿಗೆ ಎಸ್.ಬಂಗಾರಪ್ಪ ಅವರು ಕೂಡ ಇಚ್ಛಾಶಕ್ತಿ ಮೆರೆದಿದ್ದರಿಂದ ಗೇಣಿದಾರರಿಗೆ ಭೂಮಿ ಸಿಗುವಂತಾಯಿತು ಎಂದು ತಿಳಿಸಿದರು.
ಪ್ರಗತಿಪರ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ಸಾಮಾನ್ಯ ಜನರು ಭೂಮಿ ಭಾಗ್ಯ ಪಡೆಯಲು ಕಾಗೋಡು ತಿಮ್ಮಪ್ಪ ಅವರ ಕೊಡುಗೆ ಅನನ್ಯ. ಜನರು ಮೌಲ್ಯಯುತ ಜೀವನ ಕಟ್ಟಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಸ್ಡಿಎಂಸಿ ಅಧ್ಯಕ್ಷ ಸುಜಾತ್ಕುಮಾರ್, ಗ್ರಾಮ ಸಮಿತಿ ಅಧ್ಯಕ್ಷ ನಿರಂಜನ್, ಸಾಮಾಜಿಕ ಕಾರ್ಯಕರ್ತೆ ಶೇಖರಮ್ಮ, ಮಾವಲಿ ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಪೊಲೀಸ್ ಇಲಾಖೆಯ ಜಯೇಂದ್ರ, ಶಾರದಾ ಚಂದ್ರಕಾಂತ್ ಇತರರಿದ್ದರು.