

ಶಿವಮೊಗ್ಗ: ನಗರದಲ್ಲಿ ಹೆಚ್ಚಿನ ಸಂಖ್ಯೆಯ ಶಿಕ್ಷಣ ಸಂಸ್ಥೆಗಳಿವೆ. ಗ್ರಾಮೀಣ ಭಾಗದಿಂದ ನೂರಾರು ವಿದ್ಯಾರ್ಥಿಗಳು ಪ್ರತಿ ದಿನ ಶಾಲೆ ಕಾಲೇಜುಗಳಿಗೆಂದು ಬರುತ್ತಾರೆ. ಆದರೆ ಶಿವಮೊಗ್ಗದಿಂದ ಸುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸೂಕ್ತ ಬಸ್‌ಗಳ ವ್ಯವಸ್ಥೆ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಾಂತರ ಎನ್‌ಎಸ್‌ಯುಐ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.
ನೂರಾರು ವಿದ್ಯಾರ್ಥಿಗಳು ಕುವೆಂಪು ವಿವಿ ಕ್ಯಾಂಪಸ್‌ಗೆ ಹೋಗುತ್ತಾರೆ. ಅದರೆ ಶಿವಮೊಗ್ಗ ನಗರದಿಂದ ಶಂಕರಘಟ್ಟಕ್ಕೆ ಕೇವಲ ಒಂದು ಬಸ್ ಸಂಚರಿಸುತ್ತದೆ. ಹೀಗಾಗಿ ಬಸ್‌ಪಾಸ್ ಇದ್ದರೂ ವಿದ್ಯಾರ್ಥಿಗಳು ಅದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಗರ ರಸ್ತೆಯಲ್ಲಿ ಸಂಚರಿಸುವ ಬಸ್‌ಗಳು ವಾಜಪೇಯಿ ಬಡಾವಣೆಯ ವಿದ್ಯಾರ್ಥಿ ನಿಲಯದ ಬಳಿ ನಿಲುಗಡೆ ಮಾಡುತ್ತಿಲ್ಲ. ವಿದ್ಯಾರ್ಥಿಗಳು ಆಟೋದಲ್ಲಿ ಹೆಚ್ಚು ಹಣ ನೀಡಿ ಸಂಚರಿಸಬೇಕಾಗಿದೆ ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿಯಿಂದ ಬಸ್ ವ್ಯವಸ್ಥೆ ಮಾಡಬೇಕು. ಶಾಲಾ, ಕಾಲೇಜುಗಳ ಬಳಿ ಬಸ್ ನಿಲುಗಡೆಗೆ ಆದೇಶ ಮಾಡಬೇಕು. ಇಲ್ಲದೇ ಹೋದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ವಿಜಯಕುಮಾರ್, ಕಾರ್ಯಧ್ಯಕ್ಷ ರವಿ ಕಾಟಿಕೆರೆ, ಗ್ರಾಮಾಂತರ ಅಧ್ಯಕ್ಷ ಹರ್ಷಿತ್, ಪ್ರಮುಖರಾದ ಚರಣ್, ವಿಕ್ರಂ, ರವಿ, ಅಜಯ್ ಅರಸ್, ವರುಣ್ ವಿ.ಪಂಡಿತ್, ಕುಮಾರ್, ಅಶ್ವತ್ಥ , ತೌಫಿಕ್ ಮುಂತಾದವರಿದ್ದರು.