

ಸಾಗರ: ಕಿಟೆಲ್ ಅವರನ್ನು ಕ್ರೈಸ್ತ ಧರ್ಮಿಯನ್ನಾಗಿ ನೋಡದಿರಿ, ಅವರೊಬ್ಬ ಮಾನವತಾವಾದಿ. ಕನ್ನಡಕ್ಕೆ ಅವರು ನೀಡಿದ ನಿಘಂಟು ಸಾರ್ವಕಾಲಿಕ ಬಹುದೊಡ್ಡ ಕೊಡುಗೆ ಎಂದು ಚಿಂತಕ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಪರಸ್ಪರ ಸಾಹಿತ್ಯ ವೇದಿಕೆಯಿಂದ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೆವರೆಂಡ್ ಎಫ್. ಕಿಟೆಲ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕಿಟೆಲ್ ಅವರು ನಡೆದಾಡುವ ವಿಶ್ವಕೋಶದಂತಿದ್ದರು. ತಂತ್ರಜ್ಞಾನ ಇಲ್ಲದ ಸಂದರ್ಭದಲ್ಲಿ 70 ಸಾವಿರ ಕನ್ನಡ ಪದಗಳಿಗೆ ನಿಘಂಟಿನ ಮೂಲಕ ಅರ್ಥ ನೀಡುವ ಮಹಾನ್ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಕನ್ನಡದ ಮೇಲೆ ಕಿಟೆಲ್ ಅವರಿಗಿದ್ದ ಶ್ರದ್ಧೆ, ಅವರು ಪ್ರಕಟಿಸಿದ ಸಂಶೋಧನಾ ಗ್ರಂಥಗಳು ಅಪರೂಪದವು. 1875ರಲ್ಲಿ ಲಿಂಗಾಯತ ಧರ್ಮದ ಮೇಲೂ ಕೂಡ ಕರಾರುವಕ್ಕಾದ ಲೇಖನಗಳನ್ನು ಕಟ್ಟಿಕೊಟ್ಟಿದ್ದಾರೆ. ಕಿಟೆಲ್ ಅವರು ಕನ್ನಡಕ್ಕೆ ಕೊಟ್ಟ ಕೊಡುಗೆ ಅಪಾರ ಎಂದರು.
ಸಂತ ಶಿಶುನಾಳ ಶರೀಫ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ತುಮಕೂರಿನ ಡಾ. ಮಿರ್ಜಾ ಬಷೀರ್, ನಾನು ಬರೆದ ಕಥೆಗಳಲ್ಲಿ ಬಹುತೇಕ ವಿಷಯಗಳು ಕೋಮು ಸೌಹಾರ್ದದ ಮೆಲೆ ಕಟ್ಟಿಕೊಡಲಾಗಿದೆ. ಅನೇಕ ಜಾತಿ, ಧರ್ಮ, ಸಂಸ್ಕೃತಿ, ವಿಚಾರಧಾರೆಗಳಲ್ಲಿ ಚಿಂತನೆಗಳಿದ್ದರೂ ದೇವರು ಒಬ್ಬನೇ. ನವನಾಗರಿಕತೆ ಸಂಸ್ಕೃತಿ ಎಷ್ಟೇ ಮುಂದುವರಿದರೂ ಸೌಹಾರ್ದದ ಆಲೋಚನಾ ಕ್ರಮಗಳು ಮೂಡಿಬರುತ್ತಿಲ್ಲ. ನಾವೆಲ್ಲ ಒಂದೇ ಎಂಬ ಮನೋಪ್ರವೃತ್ತಿಯಿಂದ ಬದುಕಬೇಕು ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ. ಜಿ.ಎಸ್.ಭಟ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರ ನೀಡುವ ಪ್ರಶಸ್ತಿಗಳ ಬಗ್ಗೆ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿಗಳಲ್ಲಿ ಇಂದಿಗೂ ಗಟ್ಟಿತನ ಉಳಿದುಕೊಂಡಿದೆ ಎಂದರು.
ಪರಸ್ಪರ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ. ಸರ್ಫ್ರಾಜ್ ಚಂದ್ರಗುತ್ತಿ ಮಾತನಾಡಿ, ವೇದಿಕೆ 21 ವರ್ಷಗಳಿಂದ ಕನ್ನಡ ಸಾಹಿತ್ಯ ಕಟ್ಟುವ ಮತ್ತು ಹೊಸ ತಲೆಮಾರಿನಲ್ಲಿ ಸಾಹಿತ್ಯ ಓದುವ ಆಸಕ್ತಿ ಮೂಡಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. 2019ರಿಂದ ಪ್ರತಿ ವರ್ಷ ಸಂತ ಶಿಶುನಾಳ ಶರೀಫ, ಅಕ್ಕಮಹಾದೇವಿ ಮತ್ತು ರೆವರೆಂಡ್ ಎಫ್. ಕಿಟೆಲ್ ಪ್ರಶಸ್ತಿ ನೀಡುತ್ತಿದ್ದೇವೆ. ಪ್ರಶಸ್ತಿ, 10,000 ರೂ. ನಗದು ಒಳಗೊಂಡಿರುತ್ತದೆ ಎಂದು ಹೇಳಿದರು.
ಕನ್ನಡ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಹರೀಶ್ ಕೊಡಸೆ, ವೀರಪ್ಪ ಭದ್ರಾಪುರ, ಪಿ.ಶಿವರಾಮ್, ಆರ್.ಜಯಾನಾಯಕ, ಡಾ. ಕೆ.ಎಸ್.ದೇವೆಂದ್ರಪ್ಪ, ವಿಶ್ವನಾಥ ಬರೂರ್, ರಿಯಾ ಆಯಿಶಾ ಇತರರಿದ್ದರು.