

ಶಿಕಾರಿಪುರ: ಧಾರ್ಮಿಕ ಪರಂಪರೆಯಲ್ಲಿನ ಸಂಪ್ರದಾಯ, ಆಚರಣೆಗಳನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸುಧೀರ್ ಮಾರವಳ್ಳಿ ಹೇಳಿದರು.
ವಿರಕ್ತಮಠ, ಶರಣ ಸಾಹಿತ್ಯ ಪರಿಷತ್‌ನಿಂದ ಮತ್ತಿಕೋಟೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ತಿಕ ಮಾಸದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕು ಶರಣರ ನಾಡು. ಶರಣರು ಕಾಯಕ, ದಾಸೋಹ, ಸಹಬಾಳ್ವೆ ಮಂತ್ರಗಳನ್ನು ಸಾರಿದ ಮಹಾನ್ ಚೇತನರು ಎಂದು ತಿಳಿಸಿದರು.
ಬಸವಾಶ್ರಮದ ಮಾತೆ ಶರಣಾಂಬಿಕೆ ಆಶೀರ್ವಚನ ನೀಡಿ, ಧರ್ಮ ಮಾರ್ಗದಲ್ಲಿ ನಾವು ಸಾಗಿದರೆ ಧರ್ಮವು ನಮಗೆ ಸದಾ ನೆರಳಾಗಿ ಕಾಯುತ್ತದೆ. ಎಂದಿಗೂ ಧರ್ಮ ಮಾರ್ಗದಿಂದ ವಿಮುಖರಾಗಬಾರದು ಎಂದರು.
ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ದಿನೇದಿನೆ ಧಾರ್ಮಿಕ ಚಿಂತನೆಗಳು ನಶಿಸಿ ಹೋಗುತ್ತಿವೆ. ಬಸವಾದಿ ಶರಣರು ಜನಸೇವೆಯಲ್ಲಿಯೇ ಶಿವನನ್ನು ಕಂಡವರು. ಕಾಯಕ, ದಾಸೋಹ ಮಹತ್ವ ಸಾರಿದರು. ಸರ್ವರ ಹಿತವೇ ಅವರ ಆಶಯವಾಗಿತ್ತು. ಪ್ರತಿವರ್ಷ ನಾವು ವಿರಕ್ತಮಠದಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶಶಿಧರ್ ಸ್ವಾಮಿ, ಸುಭಾಷ್ ಚಂದ್ರ ಸ್ಥಾನಿಕ್, ಸೋಮಶೇಖರ್ ಗಟ್ಟಿ ಇತರರಿದ್ದರು.