

ಶಿವಮೊಗ್ಗ: ಕುಟುಂಬವೇ ಆಗಲಿ, ಸಮಾಜವೇ ಆಗಲಿ ಹಿರಿಯರ ಅಭಿಪ್ರಾಯ, ಅನುಭವಕ್ಕೆ ಮನ್ನಣೆ ನೀಡಬೇಕು. ಹಿರಿಯರ ಮಾರ್ಗದರ್ಶನ ಕುಟುಂಬ ಹಾಗೂ ಸಮಾಜಕ್ಕೆ ಅವಶ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಹೇಳಿದರು.
ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕಾಮ್ರೇಡ್ ಲಿಂಗಪ್ಪ, ವೈದ್ಯಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಕೆ.ಟಿ.ಪ್ರೇಮ್‌ಕುಮಾರ್ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಮ್ರೇಡ್ ಲಿಂಗಪ್ಪ ಇನ್ನೆರಡು ವರ್ಷಗಳಲ್ಲಿ ಶತಾಯುಷಿ ಎನಿಸಿಕೊಳ್ಳಲಿದ್ದಾರೆ. ಸಮಾಜಕ್ಕೆ ಅವರ ಮಾರ್ಗದರ್ಶನ ಅತ್ಯವಶ್ಯ. ಅವರು ಯಾವಾಗಲೂ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತಾರೆ. ಅವರ ಜೀವನವನ್ನು ಕೃತಿ ಮೂಲಕ ಪರಿಚಯಿಸಿದರೆ ಅದು ಯುವ ಜನರಿಗೆ ಪ್ರೇರಣಾದಾಯಕವಾಗಲಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್ ಮಾತನಾಡಿ, ಮಾಜಿ ಸಿಎಂ ಜೆ.ಎಚ್.ಪಟೇಲ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಹೆಸರು ಹೇಳಿ ಏಕವಚನದಲ್ಲಿ ಸಂಬೋಧಿಸುವಷ್ಟು ಸಲುಗೆ ಕಾಮ್ರೇಡ್ ಲಿಂಗಪ್ಪ ಅವರದ್ದು. ಹಿಡಿದ ಕೆಲಸ ಮುಗಿಯುವವರೆಗೂ ಬಿಡದ ಛಲಗಾರ. ಎದುರಿನ ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ. ಆತ ತಪ್ಪು ಮಾಡಿದರೆ ಅದನ್ನು ಎಲ್ಲರ ಮುಂದೆಯೇ ಹೇಳುವ ಛಾತಿ ಲಿಂಗಪ್ಪ ಅವರಿಗೆ ಇದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಕಾಮ್ರೇಡ್ ವಿಭಿನ್ನ ಹೋರಾಟಗಳಿಗೆ ಹೆಸರಾದವರು. ತಮಟೆ ಬಾರಿಸುವುದು, ಕರಪತ್ರ ಹಂಚುವುದು, ಏಕಾಂಗಿ ಧರಣಿ ಮಾಡುವುದು ಇವರ ಶೈಲಿಗಳಲ್ಲಿ ಕೆಲವು. ಸಮಾಜವನ್ನು ಸದಾ ಜಾಗ್ರತ ಸ್ಥಿತಿಯಲ್ಲಿಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯ, ವಾಣಿಜ್ಯೋದ್ಯಮಿ ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಟ್ರಸ್ಟಿಗಳಾದ ಎಸ್.ವಿ.ರಾಜಮ್ಮ, ಎಲ್.ಆದಿಶೇಷ, ಎಲ್.ಆರ್.ಗೋಪಾಲಕೃಷ್ಣ, ಎಸ್.ಸಿ.ರಾಮಚಂದ್ರ, ಸಿ.ಈರಪ್ಪ, ಶಂಕ್ರನಾಯ್ಕ ಮುಂತಾದವರು ಉಪಸ್ಥಿತರಿದ್ದರು.