

ಹೊಳೆಹೊನ್ನೂರು: ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಯಡೇಹಳ್ಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ನಾಗೇಶ್ವರ ರಾವ್ ಹೇಳಿದರು.
ಸಮೀಪದ ಯಡೇಹಳ್ಳಿಯ ಜ್ಞಾನಶ್ರೀ ಪಬ್ಲಿಕ್ ಶಾಲೆಯಲ್ಲಿ ಯಡೇಹಳ್ಳಿ ಲಯನ್ಸ್ ಕ್ಲಬ್ ಆಯೋಜಿಸಿದ್ದ ಶಿಕ್ಷಕರು, ವೈದ್ಯರು ಹಾಗೂ ಅಭಿಯಂತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೇವಾ ಕ್ಷೇತ್ರದಲ್ಲಿ ಪ್ರತಿಯೊಬ್ಬರು ತಮ್ಮನ್ನು ತೊಡಗಿಸಿಕೊಂಡು ವಿಶಿಷ್ಟ ಕೊಡುಗೆ ನೀಡಬೇಕು. ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದು ಸವಾಲಿನ ಕೆಲಸ. ಹಳ್ಳಿಗರ ಪ್ರೀತಿ ಗಳಿಸಿದ ಸರ್ಕಾರಿ ನೌಕರ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾನೆ. ಕ್ಲಬ್‌ನ ಸೇವಾ ಕ್ಷೇತ್ರ ವಿಸ್ತರಣೆಗೆ ಶ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಕರು, ವೈದ್ಯರು ಹಾಗೂ ಅಭಿಯಂತರ ದಿನಾಚರಣೆ ಪ್ರಯುಕ್ತ ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತ ಈಶ್ವರ್, ಆಯುರ್ವೇದಿಕ್ ವೈದ್ಯಾಧಿಕಾರಿ ಸುರೇಂದ್ರ, ಮುಖ್ಯಶಿಕ್ಷಕಿ ಸಾವಿತ್ರಮ್ಮ, ಸಹ ಶಿಕ್ಷಕ ಸಂಜಯ್ ಹಾಗೂ ಈಶ್ವರಪ್ಪ ಅವರಿಗೆ ಸನ್ಮಾನಿಸಲಾಯಿತು.
ವಲಯ ಅಧ್ಯಕ್ಷ ಕೆ.ಇ.ಪ್ರಶಾಂತ್, ಬೆಳ್ಳೋಡಿ ಶಿವಕುಮಾರ್, ಕೆ.ಪಿ.ಕಿರಣ್‌ಕುಮಾರ್, ದಿನೇಶ್, ಎಚ್.ಬಸಪ್ಪ, ಎಚ್.ಎನ್.ನಾಗರಾಜ್, ಸಿದ್ದಲಿಂಗಪ್ಪ, ಶೇಖರಯ್ಯ, ಎಂ.ಪಾಲಾಕ್ಷಪ್ಪ, ಅನಿಲ್‌ಕುಮಾರ್, ದೇವರಾಜ್, ಶಂಕರ್, ಪಿ.ಆರ್.ಮಾವುರಪ್ಪ, ಪರಮೇಶ್ವರಪ್ಪ, ಮೃತ್ಯುಂಜಯಸ್ವಾಮಿ, ಮಂಜುನಾಥ್, ನಂದೀಶ್ ಇತರರಿದ್ದರು.