

ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲೆಯಾದ್ಯಂತ 75 ವಾರ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಡಿಸಿ ಜಿ.ಅನುರಾಧಾ ಹೇಳಿದರು.
ಡಿಸಿ ಕಚೇರಿಯಲ್ಲಿ ಬುಧವಾರ ಅಮೃತ ಮಹೋತ್ಸವ ಆಚರಣೆ ಕುರಿತು ವಿವಿಧ ಇಲಾಖೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಆಯ್ದ ಐತಿಹಾಸಿಕ ಸ್ಥಳಗಳಲ್ಲಿ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ತಾಣಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿ ತಿಂಗಳು ಜಿಲ್ಲಾಮಟ್ಟದ ಒಂದು ಕಾರ್ಯಕ್ರಮ ಇರುವುದು. ತಾಲೂಕುಮಟ್ಟದಲ್ಲಿ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈಸೂರು, ಬಳ್ಳಿಗಾವೆ, ಶಿವಪ್ಪ ನಾಯಕ ಅರಮನೆ, ನಗರ ಕೋಟೆ, ಕವಲೇದುರ್ಗ ಕೋಟೆ, ಕುಪ್ಪಳ್ಳಿ, ಮಹಾತ್ಮಾ ಗಾಂಧಿ ಉದ್ಯಾನವನ, ಅರಸಾಳು ಮುಂತಾದ ಸ್ಥಳಗಳಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಪ್ರಮುಖ ದಿನಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಏ.13ರಂದು ಸ್ವಾತಂತ್ರ್ಯ ಹೋರಾಟದ ಕೆಚ್ಚು ಹಚ್ಚಿದ ಈಸೂರು, ಮೇ 18ರಂದು ಶಿವಪ್ಪ ನಾಯಕ ಅರಮನೆ, ಜೂನ್ 10ರಂದು ಅರಸಾಳು, ಜುಲೈ 5ರಂದು ಶಿವಮೊಗ್ಗ ಮಹಾನಗರ ಪಾಲಿಕೆ, ಕ್ವಿಟ್ ಇಂಡಿಯಾ ಚಳುವಳಿ ಹಿನ್ನೆಲೆಯಲ್ಲಿ ಆಗಸ್ಟ್ 9ರಂದು ಶಿವಮೊಗ್ಗ ಗಾಂಧಿ ಪಾರ್ಕ್, ಸೆಪ್ಟಂಬರ್ 5ರಂದು ಕವಲೆದುರ್ಗದಲ್ಲಿ ವಿದ್ಯಾರ್ಥಿಗಳಿಗೆ ಟ್ರೆಕ್ಕಿಂಗ್, 27ರಂದು ನಗರಕೋಟೆಯಲ್ಲಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ಕಾರ್ಯಕ್ರಮ, ನವೆಂಬರ್ 14ರಂದು ಕುಪ್ಪಳ್ಳಿಯಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಅದನ್ನು ಹೊರತುಪಡಿಸಿ ನಿರಂತರವಾಗಿ ಶಾಲಾ ಕಾಲೇಜುಗಳಲ್ಲಿ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಕ್ವಿಜ್, ಚಿತ್ರಕಲಾ ಸ್ಪರ್ಧೆಗಳು, ವೇಷಭೂಷಣ, ಕಿರುನಾಟಕ, ಸೈಕಲ್ ಜಾಥಾ, ಸ್ವಚ್ಛತಾ ಕಾರ್ಮಿಕರಿಗೆ ಅಭಿನಂದನೆ ಕಾರ್ಯಕ್ರಮ, ಗಾಂಧೀಜಿ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನ, ಶ್ರಮದಾನ, ಗುಡಿ ಕೈಗಾರಿಕೆಗಳಿಗೆ ಉತ್ತೇಜನ ಕಾರ್ಯಕ್ರಮ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಪ್ರದರ್ಶನ ಮುಂತಾದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.