

ಶಿವಮೊಗ್ಗ: ಶಿವಮೊಗ್ಗದಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಜನಜೀವನ ಹಸ್ತವ್ಯಸ್ತವಾಗಿತ್ತು. ಹೊಸಮನೆ ಬಡಾವಣೆಯಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ರಾತ್ರಿ ಇಡೀ ಜಾಗರಣೆ ಮಾಡಿದರು.
ರಾತ್ರಿ ಸುರಿದ ಮಳೆಗೆ ಹೊಸಮನೆ ಬಡಾವಣೆಯ ರಾಜಕಾಲುವೆ ತುಂಬಿ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿ ಎರಡರಿಂದ ಮೂರು ಅಡಿಯಷ್ಟು ನೀರು ನಿಂತುಕೊಂಡಿತ್ತು. ಇದರಿಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸಂಪೂರ್ಣ ಹಾಳಾಗಿವೆ.
ರಾಜಕಾಲುವೆ ತುಂಬಿ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಮಕ್ಕಳು, ವಯೋವೃದ್ಧರು, ಬಾಣಂತಿಯರ ಪಾಡು ಹೇಳತೀರದಾಗಿತ್ತು. ರಾತ್ರಿ ಇಡೀ ಜನಜೀವನ ಅಸ್ತವ್ಯಸ್ತವಾಗಿದ್ದು ಮಹಾನಗರ ಪಾಲಿಕೆಗೆ ಇಡಿ ಶಾಪ ಹಾಕಿದರು.
ಮಹಾನಗರ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಅವರು ನೀರು ತುಂಬಿದ ಮನೆಗಳಿಗೆ ರಾತ್ರಿ 1.30ರ ಸುಮಾರಿಗೆ ವೀಕ್ಷಣೆ ಮಾಡಿ ನಿವಾಸಿಗಳಿಗೆ ಮಾನಸಿಕ ಸ್ಥೈರ್ಯ ತುಂಬಿದರು.
ಈಗಾಗಲೇ ಹತ್ತಾರು ಬಾರಿ ಮಹಾನಗರ ಪಾಲಿಕೆಗೆ ರಾಜಕಾಲುವೆ ದುರಸ್ತಿಗೊಳಿಸುವಂತೆ ಪಾಲಿಕೆ ಆಯುಕ್ತರು, ಮೇಯರ್ ಗೆ ಮನವಿ ಮಾಡಿದರು ಸ್ಪಂದಿಸಿಲ್ಲ. ಇದೇ ಕಾರಣಕ್ಕೆ ಈ ಎಲ್ಲ ಅವಘಡಕ್ಕೆ ಕಾರಣವಾಗಿದೆ ಎಂದು ಪಾಲಿಕೆ ಸದಸ್ಯೆ ರೇಖಾ ರಂಗನಾಥ ದೂರಿದರು.
ಜ.8ರವೆಗೆ ರಾಜ್ಯದ ನಾಲ್ಕು ಜಿಲ್ಲೆಗಳನ್ನು ಎಲ್ಲೋ ಅಲೆರ್ಟ್ ಘೋಷಣೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಕಳೆದ ಎರಡು ದಿನಗಳ ಹಿಂದಷ್ಟೇ ಜಿಲ್ಲೆಯಾದ್ಯಂತ ಎಡಬಿಡದೆ ಮಳೆ ಸುರಿದಿತ್ತು.