ಬೆಟ್ಟ ರಕ್ಷಣೆಗೆ ಸಹಕರಿಸಿ

27 tth 01
ವೃಕ್ಷಲಕ್ಷ ಆಂದೋಲನದ ತಂಡ ಸ್ಥಳೀಯ ಅಧಿಕಾರಿ ವೃಕ್ಷ ಮಿತ್ರರೊಂದಿಗೆ ತೀರ್ಥಹಳ್ಳಿಯ ಕಾನು ಬೆಟ್ಟ ಪ್ರದೇಶಗಳಿಗೆ ಭೇಟಿ ನೀಡಿತು. ಅನಂತ ಹೆಗಡೆ ಆಶೀಸರ, ನಂದನ್ ಹಸಿರುಮನೆ ಮತ್ತಿತರರಿದ್ದರು.
Published on

ತೀರ್ಥಹಳ್ಳಿ: ರೈತರು ತೋಟ, ಗದ್ದೆಗಳ ಸುತ್ತ ಇರುವ ಕಾನು, ಬೆಟ್ಟ, ಅರಣ್ಯ ರಕ್ಷಣೆಗೆ ಸದಾ ಎಚ್ಚರ ವಹಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕಿನ ಆಗುಂಬೆ ಸಮೀಪದ ಹೊಸೂರಿನಲ್ಲಿ ಏರ್ಪಡಿಸಿದ್ದ ಕಾನು, ಬೆಟ್ಟ, ಗ್ರಾಮ ಭೂಮಿ ಉಳಿಸಿ ಅಭಿಯಾನದಲ್ಲಿ ವೃಕ್ಷಾರೋಪಣ ನೆರವೇರಿಸಿ ಮಾತನಾಡಿ, ಕಾನು, ಖಾತೆ ಕಾನು ಅರಣ್ಯ ಉಳಿಸಲು ಅರಣ್ಯ, ಕಂದಾಯ ಇಲಾಖೆಗಳು ನ್ಯಾಯಾಲಯದಲ್ಲಿ ವಾದ ಮಂಡಿಸಬೇಕು. ಅರಣ್ಯ ಇಲಾಖೆಯು ರೈತರ ಜತೆ ಸದಾ ಸಂಪರ್ಕದಲ್ಲಿ ಇರಬೇಕು ಎಂದು ಸೂಚಿಸಿದರು.

ರಾಜ್ಯದ ಅರಣ್ಯ ಸಂಪತ್ತಿನ ರಕ್ಷಣೆಗೆ ವೃಕ್ಷಲಕ್ಷ ಆಂದೋಲನದ ಕೊಡುಗೆ ಅಪಾರ. ಮಲೆನಾಡು ಗ್ರಾಮ ಭೂಮಿ ಉಳಿಸಿ ಆಂದೋಲನ ಶ್ಲಾಘನೀಯ ಕಾರ್ಯ ಎಂದರು.

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಮಂಡಗದ್ದೆ ಸಮೀಪ 300 ಎಕರೆ ವಿಸ್ತೀರ್ಣದ ಸಿಂಧುವಾಡಿ ಕಾನು ಧ್ವಂಸವಾಗುವುದನ್ನು ತಪ್ಪಿಸಬೇಕು. ಕಾನು ಅರಣ್ಯ ಸಂರಕ್ಷಣೆಗೆ ಅನುದಾನ ತರಲು ಶಾಸಕರು ಪ್ರಯತ್ನಿಸಬೇಕು. ಪ್ರಸ್ತುತ 20 ಸಾವಿರ ಎಕರೆ ಕಾನು ಅರಣ್ಯ ಭೂಮಿ ಅಪಾಯದಲ್ಲಿದೆ ಎಂದು ಹೇಳಿದರು.

ತೀರ್ಥಹಳ್ಳಿ ತಾಲೂಕಿನ ಕಾನು ಭೂಮಿ ಮಾಫಿಯಾ ತೆಕ್ಕೆಗೆ ಸಿಲುಕದಂತೆ ನೋಡಿಕೊಳ್ಳಬೇಕು. ಕಟ್ಟೆಕೊಪ್ಪ ಖಾತೆ ಕಾನು ಹೆಸರಲ್ಲಿ ನಾಶವಾಗುವುದನ್ನು ಜಿಲ್ಲಾಡಳಿತ ತಪ್ಪಿಸಬೇಕು. ಹೊಸನಗರ ಕುಂಬತ್ತಿ ಹಸಿರು ಬೆಟ್ಟದಲ್ಲಿನ ಗಣಿಗಾರಿಕೆ ತಡೆಯಬೇಕು. ಇಲ್ಲಿ ಭೂ ಕುಸಿತದಿಂದ ಜೀವ ಹಾನಿಯಾಗಲಿದೆ. ಅನಂತ ಹೆಗಡೆ ಅಶೀಸರ ವೃಕ್ಷಲಕ್ಷ ಆಂದೋಲನ ಅಧ್ಯಕ್ಷ

ಗ್ರಾಪಂ, ತಾಪಂ ಜೀವವೈವಿಧ್ಯ ಸಮಿತಿ, ಜನಪ್ರತಿನಿಧಿಗಳು, ಸಹಕಾರಿ ಧುರೀಣರು, ತಜ್ಞರು, ರೈತರು, ಪರಿಸರ ಸಂಘ ಸಂಸ್ಥೆಗಳು, ಗ್ರಾಮ ಪ್ರಮುಖರ ಜತೆ ಸಮಾಲೋಚನಾ ಸಭೆ ನಡೆಯಿತು.

ಮಾಮ್ಕೋಸ್ ಉಪಾಧ್ಯಕ್ಷ ಮಹೇಶ್, ಸಂಚಾಲಕ ನಂದನ್ ಹಸಿರುಮನೆ, ತಾಪಂ ಇಒ ಶೈಲಾ, ಗ್ರಾಪಂ ಅಧ್ಯಕ್ಷ ಜಗದೀಶ್, ಪಿಡಿಒ ಲಕ್ಷ್ಮೀ, ವೃಕ್ಷಲಕ್ಷ ಆಂದೋಲನದ ಕೆ.ವೆಂಕಟೇಶ್, ಆನೆಗುಳಿ ಸುಬ್ಬರಾವ್, ಶ್ರೀಪಾದ ಬಿಚ್ಚುಗತ್ತಿ, ಗಣಪತಿ, ಗಜೇಂದ್ರ ಗೊರಸಕುಡಿಗೆ, ಪರಾಶರ, ರಾಮಚಂದ್ರ, ಉರಗ ತಜ್ಞ ಗೌರಿಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net