

ಹೊಳೆಹೊನ್ನೂರು: ಹವಾಮಾನ ಬದಲಾವಣೆಯಿಂದ ಶೀತ, ಜ್ವರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದು, ಜನರು ಭಯಪಡದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಹೇಳಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ 15ನೇ ಹಣಕಾಸು ಯೋಜನೆಯಡಿ ಹೊಸಕೊಪ್ಪದಲ್ಲಿ ನಮ್ಮ ಕ್ಲಿನಿಕ್‌ಗೆ ಔಷಧ ವಿತರಣೆ ಹಾಗೂ ಪಪಂ ತ್ಯಾಜ್ಯ ವಿಲೇವಾರಿ ನೂತನ ವಾಹನಗಳಿಗೆ ಹಸಿರು ನಿಶಾನೆ ತೋರಿ ಮಾತನಾಡಿ, ರಾಜ್ಯದಲ್ಲಿ ಕರೊನಾ ಭೀತಿ ಎದುರಾಗಿದ್ದರೂ ಜನರು ಭಯಪಡದೆ ಜಾಗ್ರತೆ ವಹಿಸಬೇಕು.ಔಷಧಗಳು ಸಕಾಲದಲ್ಲಿ ಹಂಚಿಕೆಯಾಗಬೇಕು. ಸ್ಥಳೀಯರು ಪಟ್ಟಣ ಪಂಚಾಯಿತಿ ಚುನಾವಣೆ ಎದುರು ನೋಡುತ್ತಿದ್ದಾರೆ. ಶೀಘ್ರದಲ್ಲಿ ಚುನಾವಣೆ ನಡೆದು ಅಭಿವೃದ್ಧಿ ಕೆಲಸಗಳಿಗೆ ಅನುಕೂಲವಾಗಬೇಕು ಎಂದು ತಿಳಿಸಿದರು.
ಪಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮಾತನಾಡಿ, 15ನೇ ಹಣಕಾಸು ಅನುದಾನದಲ್ಲಿ 1.2 ಲಕ್ಷ ರೂ. ವೆಚ್ಚದಲ್ಲಿ ಔಷಧ ಖರೀದಿಸಿ ನೀಡಿದ್ದು, 4 ಲಕ್ಷ ರೂ. ಮೆಡಿಸಿನ್ ವಿಭಾಗಕ್ಕೆ ನೀಡಲಾಗಿದೆ. ಪಪಂ ತ್ಯಾಜ್ಯ ವಿಲೇವಾರಿಗೆ ಸ್ವಚ್ಛ ಭಾರತ್ ಮಿಷನ್‌ನಡಿ 69 ಲಕ್ಷ ರೂ. ವೆಚ್ಚದಲ್ಲಿ ಜೆಸಿಬಿ, ನಾಲ್ಕು ಟಿಪ್ಪರ್ ವಾಹನ ಖರೀದಿಸಲಾಗಿದೆ. ಪಪಂ ತ್ಯಾಜ್ಯ ವಿಲೇವಾರಿ ಸೇರಿದಂತೆ ಕುಡಿಯುವ ನೀರಿನ ವಿತರಣೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು ಎಂದರು.
ಸಮಸ್ಯೆ ಹೇಳಿಕೊಂಡ ಗ್ರಾಮಸ್ಥರು: ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಲಭ್ಯ ಇರುವುದಿಲ್ಲ. ವೈದ್ಯರ ಬದಲಿಗೆ ಬೋಧನಾ ಆಸ್ಪತ್ರೆ ಕಾಲೇಜು ಪ್ರಶಿಕ್ಷಣಾರ್ಥಿಗಳೇ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ ಎಂದು ಗ್ರಾಮಸ್ಥರು ದೂರಿದರು. ಹತ್ತಾರು ವರ್ಷಗಳಿಂದ ಪಪಂನಲ್ಲಿ ಬೇರು ಬಿಟ್ಟಿರುವ ಅಧಿಕಾರಿಗಳನ್ನು ಕೂಡಲೇ ಬದಲಾಯಿಸಬೇಕು. ನೃಪತುಂಗ ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಗೃಹಗಳಿಗೆ ಬೀಗ ಹಾಕಿದ್ದು, ಸಾರ್ವಜನಿಕರ ಬಳಕೆಗೆ ಸಿಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ಸೂಕ್ತ ನಿರ್ವಹಣೆ ಇಲ್ಲದೆ ಮೂಲೆ ಗುಂಪಾಗುತ್ತಿವೆ ಎಂದು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಅವರ ಬಳಿ ಆರೋಪಿಸಿದರು.
ತಾಲೂಕು ವೈದ್ಯಾಧಿಕಾರಿ ಆರ್.ಅಶೋಕ್, ಮುಖ್ಯ ವೈದ್ಯಾಧಿಕಾರಿ ದೇವಾನಂದ್, ಮುಖಂಡ ಶ್ರೀನಿವಾಸ್, ಬಿಂದು, ಜಿ.ಎನ್.ಪರಶುರಾಮ್, ಹರೀಶ್, ಎ.ಕೆ.ರಮೇಶ್, ಸತೀಶ್ ಗಣಾಚಾರಿ, ಸಿದ್ದಪ್ಪ, ಇಮ್ರಾನ್ ಖಾನ್, ನಾಗರಾಜ್ ರಾವ್, ಪ್ರದೀಪ್, ಅಣ್ಣಪ್ಪ, ಬಸವರಾಜ್ ಇತರರಿದ್ದರು.