ಮಲೆನಾಡಿನ ತಿನಿಸುಗಳ ತಿಳಿಯಲು ಆಹಾರ ಮೇಳ ಸಹಕಾರಿ

5sgr4
ಸಾಗರದಲ್ಲಿ ಆಯೋಜಿಸಿದ್ದ ಹಲಸಿನ ಖಾದ್ಯ ಮೇಳದಲ್ಲಿ ಹಲಸಿನ ಖಾದ್ಯಗಳನ್ನು ಕೌಶಲಾಭಿವೃದ್ಧಿ ಇಲಾಖೆಯ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ ಪ್ರದರ್ಶಿಸಿದರು. ಬದ್ರೀಶ್, ನಾಗೇಂದ್ರ ಸಾಗರ್ ಇತರರಿದ್ದರು.
Published on

ಸಾಗರ: ಹಲಸಿನ ಹಣ್ಣು ಆರೋಗ್ಯಕ್ಕೆ ಪೂರಕ. ಹಣ್ಣು ಮತ್ತು ಕಾಯಿಯಿಂದ ವೈವಿಧ್ಯ ಖಾದ್ಯಗಳನ್ನು ತಯಾರಿಸಬಹುದು. ಮಲೆನಾಡಿನ ಖಾದ್ಯಗಳ ಬಗ್ಗೆ ತಿಳಿದುಕೊಳ್ಳಲು ಇಂತಹ ಆಹಾರ ಮೇಳ ಸಹಕಾರಿ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ ಹೇಳಿದರು.

ನಗರದಲ್ಲಿ ಮಲೆನಾಡು ಗಿಡ್ಡ ರೈತ ಉತ್ಪಾದಕರ ಸಂಸ್ಥೆ, ಶಿವಮೊಗ್ಗದ ಚೈತನ್ಯ ರೂರಲ್ ಡೆಲವಲಪ್‌ಮೆಂಟ್‌ಆಯೋಜಿಸಿದ್ದ ಹಲಸಿನ ಖಾದ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಮಲೆನಾಡಿಗರು ಹಲಸಿನ ವಿವಿಧ ಖಾದ್ಯಗಳನ್ನು ತಯಾರಿಸುವಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ. ಇಂತಹ ಮೇಳಗಳ ಮೂಲಕ ಯುವ ಪೀಳಿಗೆಗೆ ಅದರ ಮಹತ್ವ ಪರಿಚಯಿಸಿದಂತೆ ಆಗುತ್ತದೆ. ಆ ಖಾದ್ಯಗಳ ಬಳಕೆ ಮತ್ತು ತಿಳಿವಳಿಕೆಗೆ ದಾರಿ ಮಾಡಿಕೊಡುತ್ತದೆ. ಹಲಸಿನ ಹಣ್ಣಿನಲ್ಲಿ ವಿವಿಧ ತಳಿಗಳಿವೆ. ಅವುಗಳನ್ನು ಉಳಿಸಿಕೊಳ್ಳುವ ಮತ್ತು ಸಂವರ್ಧನೆಗೊಳಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸಿಇಒ ಬದ್ರೀಶ್ ಮಾತನಾಡಿ, ಬಕ್ಕೆ, ರುದ್ರಾಕ್ಷಿ, ಅಂಟಿಲ್ಲದ ಹಲಸಿನ ಹಣ್ಣು, ತೈವಾನ್ ಹಲಸು ಹೀಗೆ ವೈವಿಧ್ಯ ತಳಿಗಳಿವೆ. ಮೇಳದಲ್ಲಿ 20ಕ್ಕೂ ಹೆಚ್ಚು ಬಗೆಯ ಹಲಸಿನ ಖಾದ್ಯಗಳನ್ನು ಪ್ರದರ್ಶನ ಮಾಡಿರುವುದರಿಂದ ಜನರಿಗೆ ಪರಿಚಯವಾಗುತ್ತಿದೆ ಎಂದರು.

ಮಲೆನಾಡು ಗಿಡ್ಡ ರೈತ ಉತ್ಪಾದಕರ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ನಾಗೇಂದ್ರ ಸಾಗರ್ ಮಾತನಾಡಿ, ಇತ್ತೀಚೆಗೆ ಹಲಸಿನ ಹಪ್ಪಳದ ಜತೆಗೆ ಹಲಸಿನ ಬೀಜಗಳಿಂದ ತಯಾರಾಗುವ ಖಾದ್ಯಗಳಿಗೆ ಬಹು ಬೇಡಿಕೆ ಇದೆ. ಹಾಗಾಗಿ ಹಲಸಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಬೆಳೆಗಳಿಗೆ ಮತ್ತು ಅದರಿಂದ ತಯಾರಾದ ವಿವಿಧ ಉತ್ಪನ್ನಗಳಿಗೆ ಉತ್ತಮ ಬೆಲೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ರಾಧಾಕೃಷ್ಣ ಬಂದಗದ್ದೆ, ಶ್ರಾವ್ಯಾ ಸಾಗರ್ ಹಾಗೂ ಸಂಸ್ಧೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜನಮನ ಸೆಳೆದ ವಿವಿಧ ಉತ್ಪನ್ನ: ಸಾಗರ, ಯಲ್ಲಾಪುರ, ಶಿವಮೊಗ್ಗ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಬಾಣಸಿಗರು ವೈವಿಧ್ಯಮಯ ಹಲಸಿನ ಖಾದ್ಯ ತಯಾರಿಸಿ ಉಣಬಡಿಸಿದರು. ಹಲಸಿನ ಬರ್ಫಿ, ಕರದಂಟು, ಹಲಸಿನ ಹಪ್ಪಳ, ಹಲಸಿನ ಕಾಯಿ ಕಬಾಬ್, ಹಲಸಿನ ಬೀಜದ ಖಾದ್ಯಗಳನ್ನು ಜನರು ಚಪ್ಪರಿಸಿದರು. ಹಲಸಿನ ಕಾಯಿ, ಹಣ್ಣಿನ ಬೀಜದಲ್ಲಿ ತಯಾರಿಸಿದ ಖಾದ್ಯಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ವಾಣಿಶ್ರೀ ಸಾಗರ್, ಅಮೃತಾ ಜೋಗ್ ಕೆಳದಿ, ಯಲ್ಲಾಪುರದ ಶಂಕರ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net