

ಕಾರ್ಗಲ್: ಕೆಪಿಸಿ ನಿಗಮ 55 ವರ್ಷಗಳಿಂದ ನಿರಂತರವಾಗಿ ವಿದ್ಯುತ್ ಉತ್ಪಾದಿಸುವ ರಾಜ್ಯದ ಏಕೈಕ ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತಿದೆ ಎಂದು ಶರಾವತಿ ಯೋಜನಾ ಪ್ರದೇಶದ ಕೆಪಿಸಿ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತ ಎಂ.ಮಾದೇಶ್ ಹೇಳಿದರು.
ಕೆಪಿಸಿ ಅಫಿಷಿಯಲ್ಸ್ ರಿಕ್ರಿಯೇಶನ್ ಕ್ಲಬ್‌ನಲ್ಲಿ ಕರ್ನಾಟಕ ವಿದ್ಯುತ್ ನಿಗಮದಿಂದ ಏರ್ಪಡಿಸಿದ್ದ 56ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, 1970ರಲ್ಲಿ ನಿಗಮ ಆರಂಭದಲ್ಲಿ 746 ಮೆಗಾವಾಟ್ ಉತ್ಪಾದನೆ ಇದ್ದು, ಜಲ ವಿದ್ಯುತ್, ಥರ್ಮಲ್, ಪವನ ಶಕ್ತಿ, ಸೋಲಾರ್, ತ್ಯಾಜ್ಯ ವಸ್ತು ಸೇರಿ ವಿವಿಧ ಮೂಲಗಳಿಂದ ಪ್ರಸ್ತುತ 9,119 ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತಿದೆ ಎಂದು ತಿಳಿಸಿದರು.
ಹೊಸ ಯೋಜನೆಗಳು ಖಾಸಗಿ ಪಾಲು
ಕೆಪಿಸಿ ಸಂಸ್ಥೆ ಏಷ್ಯಾದಲ್ಲೇ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದಿಸಿ ರಾಜ್ಯದ ಜನರಿಗೆ ನೀಡುವ ಕೆಲಸ ಮಾಡುತ್ತಿದೆ. ಸಂಸ್ಥೆಯಲ್ಲಿ ನೈಪುಣ್ಯ ಪಡೆದ ಇಂಜಿನಿಯರ್ ಹಾಗೂ ದಕ್ಷ ಸಿಬ್ಬಂದಿ ಹೊಂದಿದ್ದರೂ ಹೊಸ ವಿದ್ಯುತ್ ಯೋಜನೆಗಳನ್ನು ನಿಗಮಕ್ಕೆ ನೀಡಲು ಆರ್ಥಿಕವಾಗಿ ಹಣಕಾಸಿನ ತೊಂದರೆ ಇದೆ ಎಂದು ಸರ್ಕಾರ ಖಾಸಗಿ ಕಂಪನಿಗಳಿಗೆ ನೀಡುತ್ತಿರುವುದು ವಿಪರ್ಯಾಸ ಎಂದು ಕೆ.ವೀರೇಂದ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆಪಿಸಿ ಸಂಸ್ಥೆಯು ಹೊಸ ಯೋಜನೆಗೆ ಹಣ ಹೂಡಲು ಕಷ್ಟ. ತನ್ನ ಮಿತಿಗಿಂತ ಅಧಿಕ ಸಾಲ ಹೊಂದಿರುವ ಹಿನ್ನೆಲೆಯಲ್ಲಿ ಸಾಲಗಳು ದೊರೆಯುವುದಿಲ್ಲ ಎನ್ನುತ್ತಾರೆ. ಸಾರ್ವಜನಿಕ ಉದ್ಯಮ ಎಂದರೆ ಅದು ಸಾರ್ವಜನಿಕರದ್ದಾಗಿದೆ. ಹೀಗೆಯೇ ಮುಂದುವರಿದರೆ ಖಾಸಗಿ ಸಂಸ್ಥೆಗಳು ವಿದ್ಯುತ್ ಕ್ಷೇತ್ರದಲ್ಲಿ ಮುಂದೊಂದು ದಿನ ಏಕಸ್ವಾಮ್ಯ ಸಾಧಿಸಿದರೆ ಯೂನಿಟ್‌ಗೆ 25 ರೂ. ಆದರೂ ಅಚ್ಚರಿ ಪಡಬೇಕಿಲ್ಲ. ಇದನ್ನು ಕೊಡುವುದಿಲ್ಲ ಎಂದರೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸುವ ಮಾರ್ಗ ಅನುಸರಿಸುತ್ತಾರೆ. ಆದರೆ ಕೆಪಿಸಿ ಸಂಸ್ಥೆಯು ಲಾಭದ ಉದ್ದೇಶ ಇಟ್ಟುಕೊಳ್ಳದೆ ಬದ್ಧತೆಯಿಂದ 24 ತಾಸು ನಿರಂತರವಾಗಿ ವಿದ್ಯುತ್ ಉತ್ಪಾದಿಸಿ ರಾಜ್ಯದ ಗ್ರಿಡ್‌ಗಳಿಗೆ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ.ವೀರೇಂದ್ರ ಮಾತನಾಡಿ, ಕೆಪಿಸಿಯಂತಹ ಸಾರ್ವಜನಿಕ ಉದ್ದಿಮೆ ಇರುವುದರಿಂದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಪ್ರತಿ ಮನೆಗೆ ಉಚಿತ 200 ಯೂನಿಟ್ ವಿದ್ಯುತ್ ನೀಡಲು ಸಾಧ್ಯವಾಗಿರುವುದನ್ನು ಸರ್ಕಾರ ಮನಗಾಣಬೇಕು ಎಂದು ಕೆ.ವೀರೇಂದ್ರ ಹೇಳಿದರು. ಆರಂಭದಲ್ಲಿ 12 ಸಾವಿರ ಉದ್ಯೋಗಿಗಳಿದ್ದ ನಿಗಮ ಪ್ರಸ್ತುತ ಕೇವಲ 3 ಸಾವಿರಕ್ಕೆ ಇಳಿದಿದೆ. ಹೊಸ ನೇಮಕಾತಿ ಮಾಡಿ ಕೊರತೆ ನೀಗಿಸುವಂತೆ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಅಂದಾಜು 20 ಸಾವಿರ ಕೋಟಿ ರೂ. ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಿಂದ ಸಂಸ್ಥೆಗೆ ಹೊರ ಬಾಕಿ ಬರಬೇಕಿದೆ. ಕೆಪಿಸಿ ಮತ್ತು ಎಸ್ಕಾಂಗಳು ಸಾರ್ವಜನಿಕ ಉದ್ಯಮಗಳಾದ್ದರಿಂದ ಸಂದಾಯವಾಗಲು ಸಾಧ್ಯವಾಗಿಲ್ಲ. ಬರಬೇಕಾದ ಬಾಕಿ ಹಣಕ್ಕೆ ಯಾರೂ ಮಾತನಾಡುವವರು ಇಲ್ಲವಾಗಿದೆ.
ಕೆ.ವೀರೇಂದ್ರ
ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಕೇಂದ್ರ ಸಮಿತಿ ಅಧ್ಯಕ್ಷ
25 ವರ್ಷ ಸೇವೆ ಸಲ್ಲಿಸಿದ ಜಿ.ಇ.ಮೋಹನ್, ಶಂಕರಪ್ಪ, ವೇದಾಕ್ಷಿ ಮತ್ತು ಪಿ.ಕೆ.ಮಂಜುನಾಥ್ ಅವರಿಗೆ ಸಂಸ್ಥೆಯ ವಾಚ್ ಹಾಗೂ ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಕೆಪಿಸಿ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಮೃತ್ಯುಂಜಯ, ಅಧೀಕ್ಷಕ ಅಭಿಯಂತ ಆರ್.ಶಿವಕುಮಾರ್, ಸಿಬ್ಬಂದಿ ಅಧಿಕಾರಿ ಪೂರ್ಣಿಮಾ ಗಿಡ್ಡಪ್ಪಗೌಡ, ನಿವೃತ್ತ ಉದ್ಯೋಗಿ ಬಿ.ಟಿ.ಧರ್ಮಪ್ಪ ಗೌಡ, ಎಸ್‌ಸಿಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಮಿರ್ಜಾಕುಮಾರ್ ಉಪಸ್ಥಿತರಿದ್ದರು.