

ಶಿಕಾರಿಪುರ: ಮನುಷ್ಯನ ದುರಾಸೆಯಿಂದ ಪರಿಸರ ಸಮತೋಲನ ಕಳೆದುಕೊಳ್ಳುತ್ತಿದ್ದು ಭವಿಷ್ಯದ ದೃಷ್ಟಿಯಿಂದ ಜನತೆ ಪರಿಸರ ಕಾಳಜಿ ಹೊಂದುವುದು ಅವಶ್ಯ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ ಹೇಳಿದರು.
ಪುಷ್ಪ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಸಸಿಗಳನ್ನು ನೆಟ್ಟರೆ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ, ಅವುಗಳನ್ನು ಸಂರಕ್ಷಿಸಬೇಕು. ಪರಿಸರ ಸ್ವಚ್ಛವಾಗಿಟ್ಟುಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಪರೋಪಕಾರಂ ಸಂಸ್ಥೆಯ ದಾವಣಗೆರೆ ಲಕ್ಷ್ಮಣ್ ಮಾತನಾಡಿ, ಪ್ರತಿಯೊಬ್ಬರು ಜನ್ಮದಿನ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಒಂದೊಂದು ಸಸಿ ನೆಟ್ಟು ಅವುಗಳನ್ನು ಸಂರಕ್ಷಿಸಿ ಪೋಷಿಸಬೇಕು. ಇದರಿಂದ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಿ.ಎಲ್.ರಾಜು ಮಾತನಾಡಿ, ನಾವು ಬೆಳೆಸುವ ಗಿಡಗಳು ಹಣ್ಣು, ಹೂವು ಬಿಡಬೇಕು. ಇದರಿಂದ ಪ್ರಾಣಿ-ಪಕ್ಷಿಗಳಿಗೂ ಆಹಾರ ದೊರಕುತ್ತದೆ ಎಂದು ತಿಳಿಸಿದರು.
ಎಸಿಎಫ್ ಎಸ್.ಬಿ.ರವೀಂದ್ರ ನಾಯಕ್, ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ, ಪುಷ್ಪ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜೋಯ್ ಜೋಲ್ಸನ್ ಅಂದ್ರದೆ, ಮುಖ್ಯಶಿಕ್ಷಕಿ ಸಿಸ್ಟರ್ ಎಡ್ರಿನ್, ಶಿಕ್ಷಕಿ ಉಮಾ, ಶಿವಕುಮಾರ್, ಸುರೇಶ್ ಇತರರಿದ್ದರು.