

ತ್ಯಾಗರ್ತಿ: ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಸಂಸ್ಕಾರ ನೀಡಿ ಉತ್ತಮ ನಾಗರಿಕರನ್ನಾಗಿ ಮಾಡುವುದು ಪಾಲಕರ ಜವಾಬ್ದಾರಿ ಎಂದು ಸಾಗರ ಇಒ ಶಿವಪ್ರಕಾಶ್ ಹೇಳಿದರು.
ವಿವೇಕಾನಂದ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಈಗಿನ ವಿಭಜಿತ ಕುಟುಂಬಗಳಲ್ಲಿ ಮೊಬೈಲ್ ಗೀಳು ತಂದೆ, ತಾಯಿ ಮತ್ತು ಮಕ್ಕಳನ್ನು ಪ್ರತ್ಯೇಕವಾಗಿಸಿದೆ. ಮುಂದಿನ ಪೀಳಿಗೆಗೆ ನಾವು ಮಾರ್ಗದರ್ಶಕರಾಗಿ ಒಳ್ಳೆಯದನ್ನು ಕಲಿಸಬೇಕು. ಒಳ್ಳೆಯ ಜನರ ಸಹವಾಸ ಮಾಡುವುದು, ಉತ್ತಮ ಪುಸ್ತಕಗಳನ್ನು ಓದುವಂತೆ ಸೂಚಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಉತ್ತಮ ವಾತಾವರಣ ಕಲ್ಪಿಸಬೇಕು ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಷಯವಾರು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಶಾಲೆಯಲ್ಲಿ ಏರ್ಪಡಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗಡಿ ಭದ್ರತಾ ಪಡೆ ಯೋಧ ಉಮೇಶ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಸ್ಥೆ ಅಧ್ಯಕ್ಷ ಗಣಪತಿ, ತ್ಯಾಗರ್ತಿ ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಲೋಕಪ್ಪ, ಬರೂರು ಗ್ರಾಪಂ ಅಧ್ಯಕ್ಷ ಖಂಡೋಜಪ್ಪ, ಹಿರೇಬಿಲಗುಂಜಿ ಗ್ರಾಪಂ ಅಧ್ಯಕ್ಷ ಪ್ರಶಾಂಶ್ ಖಂಡೋಜಿ , ಇಸಿಒ ಪಾಲಾಕ್ಷಪ್ಪ, ಪ್ರೌಢಶಾಲೆ ಮುಖ್ಯಶಿಕ್ಷಕ ತೊಳಜಾನಾಯ್ಕ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸರ್ವೇಶ್, ಸಂಸ್ಥೆ ಪದಾಧಿಕಾರಿಗಳಾದ ಸದಾಚಾರಿ ಗೌಡ, ಎಲ್.ಆರ್.ವೀರಪ್ಪ ಗೌಡ, ಅಮೃತರಾಜ್ ಇತರರಿದ್ದರು.