

ತ್ಯಾಗರ್ತಿ: ಗ್ರಾಮೀಣ ಭಾಗದ ಜನರ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ತಾಲೂಕು ಯೋಜನಾಧಿಕಾರಿ ಶಾಂತಾ ನಾಯ್ಕ ಹೇಳಿದರು.
ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಜ್ಞಾನ ವಿಕಾಸ ಕೇಂದ್ರದಿಂದ ಆಯೋಜಿಸಿದ್ದ ಹೊಲಿಗೆ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿ, ಯೋಜನೆಯು ಆರ್ಥಿಕ ಚಟುವಟಿಕೆಗೆ ಸೀಮಿತವಲ್ಲದೆ ಕುಟುಂಬದ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಸಹಾಯ ಮಾಡುತ್ತಿದೆ. ಯೋಜನೆಯ ಸೌಲಭ್ಯಗಳು ಸದ್ಬಳಕೆ ಆಗಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ 886 ಕೆರೆಗಳನ್ನು ಅಭಿವೃದ್ಧಿಪಡಿಸಿದ್ದು, ತ್ಯಾವರೆಕೊಪ್ಪದಲ್ಲಿ ಹತ್ತು ಕೆರೆಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ನಮ್ಮ ಯೋಜನೆಯಿಂದ ರಾಜ್ಯದಲ್ಲಿ ಒಂದು ಸಾವಿರ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು. ವಾತ್ಸಲ್ಯ ಯೋಜನೆ ಮೂಲಕ ನಿರ್ಗತಿಗರಿಗೆ ಪೌಷ್ಟಿಕ ಆಹಾರ, ಮಾಸಾಶನ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತಿದೆ ಎಂದರು.
ವಿಶ್ವ ಜಲದಿನ ಪ್ರಯುಕ್ತ ನೀರಿನ ಬಳಕೆ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಯಿತು. ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಿರಣ್ ದೊಡ್ಮನೆ, ಗ್ರಾಪಂ ಸದಸ್ಯ ಇಸಾಕ್, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಗೌರಮ್ಮ, ಮೇಲ್ವಿಚಾರಕ ಧರ್ಮಪ್ಪ, ತರಬೇತಿ ಶಿಕ್ಷಕಿ ಸಾವಿತ್ರಿ, ಸೇವಾ ಪ್ರತಿನಿಧಿ ಜಗದೀಶ್, ಭಾರತಿ ಇತರರಿದ್ದರು.